ಭೂ ದಾಖಲೆ ಡಿಜಿಟಲೀಕರಣದಲ್ಲಿ ತಾಲೂಕು ಪ್ರಥಮ

19 CRP-1A
ಚನ್ನರಾಯಪಟ್ಟಣ ಆಡಳಿತಸೌಧ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಡಿಜಿಟಲೀಕರಣ ಭೂ ದಾಖಲೆಗಳನ್ನು ಸಾರ್ವಜನಿಕರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ವಿತರಿಸಿದರು. ಸಂತೋಷ್ ಕುಮಾರ್, ಅನಿಲ್, ಶ್ರೀಧರ್, ಶಿವೇಗೌಡ, ಜೈಪಾಲ್, ಆನಂದ್ ಕಾಳೆನಹಳ್ಳಿ, ಹಡೇನಹಳ್ಳಿ ಲೋಕೇಶ್ ಇದ್ದರು.
Published on

ಚನ್ನರಾಯಪಟ್ಟಣ: ಭೂ ಸುರಕ್ಷಾ ಯೋಜನೆಯಡಿ ಸಾರ್ವಜನಿಕರ ಹಳೆಯ ಭೂ ದಾಖಲೆಗಳು ನಾಶವಾಗದಂತೆ ಶಾಶ್ವತವಾಗಿ ಉಳಿಯಲು ಡಿಜಿಟಲೀಕರಣಗೊಳಿಸುವಲ್ಲಿ ತಾಲೂಕು ಜಿಲ್ಲೆಯಲ್ಲೇ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಆಡಳಿತಸೌಧದ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಡಿಜಟಲೀಕರಣ ಭೂ ದಾಖಲೆಗಳನ್ನು ವಿತರಿಸಿ ಅವರು ಮಾತನಾಡಿ, ಈ ಮೊದಲು ಭೂಮಿಗೆ ಸಂಬಂಧಿಸಿದ ಹಳೆಯ ದಾಖಲೆಗಳನ್ನು ಪಡೆಯಲು ಸಾರ್ವಜನಿಕರು ತಿಂಗಳುಗಟ್ಟಲೆ ಕಚೇರಿಗೆ ಅಲೆಯಬೇಕಿತ್ತು. ಡಿಜಟಲೀಕರಣಗೊಂಡ ನಂತರ ಅರ್ಜಿ ಸಲ್ಲಿಸಿದ ನಂತರ ನಿಗದಿತ ಸಮಯದೊಳಗೆ ಭೂ ದಾಖಲೆಗಳು ದೊರೆಯುತ್ತವೆ. ಸಾರ್ವಜನಿಕರು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಹಾಗೂ ಸುಳ್ಳು ದಾಖಲೆ ಸೃಷ್ಟಿಸುವುದನ್ನು ತಡೆಯಲು ಭೂಸುರಕ್ಷಾ ಯೋಜನೆಯಿಂದ ರೈತರ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಸುರಕ್ಷಿತವಾಗಿಡಬಹುದು. ಬೇಕಾದಾಗ ಸುಲಭವಾಗಿ ಪಡೆದುಕೊಳ್ಳಬಹುದು. ರೈತರು ವಿನಾಕಾರಣ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಈ ಯೋಜನೆಗಾಗಿ ನುರಿತ ಸಿಬ್ಬಂದಿ ನೇಮಿಸಲಾಗಿದೆ. ಈವರೆಗೆ 60 ಲಕ್ಷ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಬಾಕಿ ಉಳಿದಿರುವ 15 ಲಕ್ಷ ಭೂ ದಾಖಲೆಗಳನ್ನು ಶೀಘ್ರ ಡಿಜಿಟಲೀಕರಣಗೊಳಿಸಲಾಗುವುದು. ರೆಕಾರ್ಡ್ ರೂಂನಲ್ಲಿರುವ ಹಳೇ ದಾಖಲೆಗಳು ಪೇಪರ್‌ನಲ್ಲಿದ್ದು, ಇದು ನಶಿಸಿ ಹೋಗುವ ಅಪಾಯವಿತ್ತು. ನೂರಾರು ವರ್ಷಗಳ ದಾಖಲೆಗಳನ್ನು ಸುರಕ್ಷಿತವಾಗಿಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಭೂ ದಾಖಲೆಗಳನ್ನು ಈಗಾಗಲೇ 51,14,418 ಪುಟಗಳು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲಾಗಿದೆ. ಬಾಕಿ ಉಳಿದಿರುವ 15,84,209 ಪುಟಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಜುಲೈ 1ರಿಂದ ಸಾರ್ವಜನಿಕರು ತಹಸೀಲ್ದಾರ್ ಕಚೇರಿಯಲ್ಲಿ ಪ್ರಾರಂಭಿಸಿರುವ ದಾಖಲೆ ವಿಭಾಗಕ್ಕೆ ಭೇಟಿ ನೀಡಿ ತಮ್ಮ ಡಿಜಟಲೀಕರಣ ಭೂ ದಾಖಲೆಗಳನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಕಂದಾಯ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಜಾರಿಗೆ ತರುವ ಉದ್ದೇಶದಿಂದ ಪ್ರಾರಂಭಿಕ ಹಂತದಲ್ಲಿ ಪ್ರತಿ ದಿನ ಕನಿಷ್ಠ 10 ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಪಡೆದು, ಡಿಜಿಟಲ್ ಪ್ರತಿಗಳನ್ನು ತಂತ್ರಾಂಶದಲ್ಲಿಯೇ 2 ದಿನಗಳೊಳಗಾಗಿ ನೀಡಲಾಗುವುದು. ದಾಖಲೆಯು ಸ್ಕ್ಯಾನಿಂಗ್ ಆಗದಿದ್ದಲ್ಲಿ 7 ದಿನಗಳೊಳಗಾಗಿ ಸ್ಕ್ಯಾನಿಂಗ್ ಮಾಡಿ ಡಿಜಿಟಲ್ ಪ್ರತಿಯನ್ನೇ ಸಾರ್ವಜನಿಕರಿಗೆ ವಿತರಿಸಲಾಗುವುದು. ಕಂದಾಯ ಇಲಾಖೆಯ ಭೂಮಿ ಸರ್ವೇ ಮತ್ತು ನೋಂದಣಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಶಾಶ್ವತವಾಗಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಿರುವುದಲ್ಲದೇ ಸಾರ್ವಜನಿಕರು ಆನ್‌ಲೈನ್ ಮೂಲಕ ತ್ವರಿತವಾಗಿ ಪಡೆದುಕೊಳ್ಳಲು ಭೂ ಸುರಕ್ಷಾ ಯೋಜನೆ ಸಹಕಾರಿಯಾಗಿದೆ ಎಂದರು.

ರೈತರಿಗೆ ಡಿಜಿಟಲೀಕರಣ ಭೂ ದಾಖಲೆಗಳನ್ನು ವಿತರಿಸಲಾಯಿತು. ಶಿರಸ್ತೇದಾರ್ ಅನಿಲ್, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್, ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಶಿವೇಗೌಡ, ಅಧ್ಯಕ್ಷ ಎ.ವಿ.ಜೈಪಾಲ್, ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೆನಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net