

ಗುಡಿಬಂಡೆ: ಪಂಚಗಿರಿಗಳಿಂದ ಕೂಡಿರುವ ತಾಲೂಕು ಗುಡಿಬಂಡೆ. ಇಲ್ಲಿ ನಡೆಯುತ್ತಿರುವ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಧ್ವಜಾರೋಹಣದೊಂದಿಗೆ ಆರಂಭವಾಗಿ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ನಡೆದಿದ್ದು ಸಂತಸ ತಂದಿದೆ ಎಂದು ಸಮ್ಮೇಳನಾಧ್ಯಕ್ಷ ಅಮೀರ್ ಹೇಳಿದರು.
ಐತಿಹಾಸಿಕವಾಗಿ ಪ್ರಸಿದ್ಧಿಯಾಗಿರುವ ಪಟ್ಟಣ ಮತ್ತು ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ತಾಲೂಕು ಕೇಂದ್ರದಲ್ಲಿ ಪಾಲಿಟೆಕ್ನಿಕ್ ಕಾಲೇಜು, ಬಿ.ಇಡಿ ಕಾಲೇಜು, ಐಟಿಐ ಕಾಲೇಜಿನ ಉನ್ನತೀಕರಣ ಹಾಗೂ ನಸಿರ್ಂಗ್ ಕಾಲೇಜು ಆರಂಭಿಸುವ ಅಗತ್ಯವಿದೆ. ಆರೋಗ್ಯ ಸೌಲಭ್ಯವನ್ನು ತಾಲೂಕಿನ ಪ್ರತಿಹಳ್ಳಿಗೂ ವಿಸ್ತರಿಸಬೇಕಾಗಿದೆ ಎಂದರು.
ತಾಲೂಕು ಕೃಷಿ ಪ್ರಧಾನವಾಗಿದ್ದು, ಅಂತರ್ಜಲಮಟ್ಟ ಹೆಚ್ಚಳವಾಗಬೇಕಾದರೆ ಅಮಾನಿಬೈರಸಾಗರ ಕೆರೆಯಲ್ಲಿ ಹೂಳು ಎತ್ತುವ ಕಾರ್ಯ ಅಗತ್ಯವಾಗಿದೆ. ತಾಲೂಕಿನ ಯುವಜನಾಂಗ ಉದ್ಯೋಗಕ್ಕಾಗಿ ಪ್ರತಿದಿನ ಗುಡಿಬಂಡೆಯಿಂದ ಹೊರ ಜಿಲ್ಲೆಗಳಿಗೆ ತೆರಳುತ್ತಿದ್ದು, ಸ್ಥಳೀಯವಾಗಿಯೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಬೀಚಗಾನಹಳ್ಳಿ ಬಳಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕ ಪ್ರಗತಿ ಜತೆಗೆ ನಿರುದ್ಯೋಗ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರವಾಸೋದ್ಯಮ ಕೇಂದ್ರ
ಗುಂಡಿಬಂಡೆ ಪ್ರವಾಸಿ ಕೇಂದ್ರವಾಗಬೇಕು ಎನ್ನುವುದು ಸ್ಥಳೀಯರ ಕನಸು. ಪ್ರತಿ ಶನಿವಾರ ಮತ್ತು ಭಾನುವಾರ ಅನೇಕ ಮಂದಿ ಸುರಸದ್ಮಗಿರಿ ಬೆಟ್ಟ ಹತ್ತಿ ಪ್ರಕೃತಿ ಸೌಂದರ್ಯ ಸವಿಯಲು ಬರುತ್ತಾರೆ. ಆದರೆ ಬೆಟ್ಟದಲ್ಲಿ ಶಿಥಿಲವಾಗುತ್ತಿರುವ ಕೋಟೆಯನ್ನು ರಕ್ಷಿಸಬೇಕಿದೆ. ಬೆಟ್ಟದಲ್ಲಿ ಗಿಡಮರ ಬೆಳೆಸಲು ಕ್ರಮ ಕೈಗೊಳ್ಳಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ವಿದ್ಯಾಗಿರಿಯಿಂದ ಸುರಸದ್ಮಗಿರಿಗೆ ರೋಪ್‌ವೇ ನಿರ್ಮಾಣ, ಅಮಾನಿ ಬೈರಸಾಗರದಲ್ಲಿ ದೋಣಿ ವಿಹಾರಕ್ಕೆ ಯೋಜನೆ ರೂಪಿಸಿದರೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಬಹುದು ಎಂದು ಅಮೀರ್‌ಜಾನ್ ಹೇಳಿದರು.
ಹಲವು ಬೇಡಿಕೆ
ತಾಲೂಕಿನಲ್ಲಿರುವ ದೇವಸ್ಥಾನ, ಜೈನ ಬಸದಿ, ದರ್ಗಾಗಳ ಇತಿಹಾಸವನ್ನು ಪ್ರಚಾರ ಮಾಡಬೇಕು. ಗುಡಿಬಂಡೆ ಪಟ್ಟಣದಲ್ಲಿರುವ ಹಳೆಯ ಕೋರ್ಟ್ ಕಟ್ಟಡ ಸ್ಥಳದಲ್ಲಿ ಯಾವುದೇ ವಾಣಿಜ್ಯ ಸಂಕೀರ್ಣಗಳ ಸ್ಥಾಪನೆ ಮಾಡದೆ ಅಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಿ ವಾಲಿಬಾಲ್, ಷಟಲ್, ಕಬಡ್ಡಿ ಆಡಲು ಅನುಕೂಲವಾಗುತ್ತದೆ. ಸಾರಿಗೆ ಸಂಸ್ಥೆ ಬಸ್ ಘಟಕಕ್ಕೆ ಜಾಗಮಂಜೂರಾಗಿದ್ದು, ಶೀಘ್ರವಾಗಿ ಡಿಪೋ ನಿರ್ಮಾಣಕ್ಕೆ ಕ್ರಮವಾಗಬೇಕು. ತಾಲೂಕು ಕಚೇರಿ ಎದುರು ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸುವಂತೆ ಅಮೀರ್‌ಜಾನ್ ಆಗ್ರಹಿಸಿದರು.
ವಿಚಾರ ಗೋಷ್ಠಿ
ಸಮ್ಮೇಳನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವದಲ್ಲಿ ಮಹಿಳಾ ಪ್ರಾತಿನಿಧ್ಯ ಮತ್ತು ಸವಾಲುಗಳ ಬಗ್ಗೆ ವಿಚಾರಗೋಷ್ಠಿ ಆಯೋಜಿಸಲಾಗಿತ್ತು. ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ ಇಒ ಎಂ.ನಾಗಮಣಿ ಮಾತನಾಡಿದರು. ವಕೀಲೆ ಯೋಗೇಶ್ವರಿ ವಿಜಯ್, ಡಿ.ಎಲ್.ಪರಿಮಳಾ, ಶಿಕ್ಷಕಿ ಎನ್.ಸುಮಿತ್ರಾ, ಜಿ.ಎನ್.ಭಾರತಿ, ಪಿ.ವಿ.ವೀಣಾ, ಜೀವಿಕ ರತ್ನಮ್ಮ, ವೀಣಾ ನಿತಿನ್, ಅಮರಾವತಿ, ಅಂಬಿಕಾ ಸುದರ್ಶನ್ ಮಹಿಳೆಯರು ಸಮಾಜದಲ್ಲಿ ಹಾಗೂ ರಾಜಕೀಯವಾಗಿ ಸೇರಿ ಇತರ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಿದರು.
ನಂತರ ನಿಕಟಪೂರ್ವ ಅಧ್ಯಕ್ಷೆ ಅನುರಾಧಾ ಆನಂದ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಆಯೋಜಿಸಲಾಗಿತ್ತು. ಸಿದ್ದೇಶ್ ಬಂಡಿಮನೆ, ನಂಜರೆಡ್ಡಿ, ಗುಂಪುಮರದ ಆನಂದ, ವಾಹಿನಿ ಸುರೇಶ್, ವಿ.ರಾಜಶೇಖರ್, ರಫೀಕ್, ಡಿ.ಆರ್.ಅನಿತಾ, ಪುನಿತ್ ಕನ್ನಡಿಗ ಅವರು ಕವನ ವಾಚನ ಮಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಗುಡಿಬಂಡೆಯ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು. ಐಶ್ವರ್ಯ ಕಲಾ ನಿಕೇತನದಿಂದ ಕುರಿಬಾಂಡ್ ಐ-ಸಾಗರ್ ನಿರ್ದೇಶನದ ನಕ್ಕು ನಗಿಸುತ್ತಲೇ ಮಾನವೀಯ ಮೌಲ್ಯಗಳನ್ನು ತಿಳಿಸುವ ಹಾಸ್ಯಮಯ ನಾಟಕ ಮಿಸ್ ಸೇವಂತಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ವೀಕ್ಷಕರು ನಗೆಗಡಲ್ಲಲಿ ತೇಲಿದರು.
ತಹಸೀಲ್ದಾರ್ ಸಿಗ್ಬತ್‌ವುಲ್ಲಾ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಮುನಿಕೆಂಪೇಗೌಡ, ಪಪಂ ಸಿಇಒ ಸಬಾ ಶಿರೀನ್, ಬಿಇಒ ಕೃಷ್ಣಪ್ಪ, ಪಪಂ ಅಧ್ಯಕ್ಷ ಎ.ವಿಕಾಸ್, ಉಪಾಧ್ಯಕ್ಷ ಗಂಗರಾಜು, ಕಸಾಪ ತಾಲೂಕು ಅಧ್ಯಕ್ಷ ಬಿ.ಮಂಜುನಾಥ್, ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ನಿಕಟಪೂರ್ವ ಅಧ್ಯಕ್ಷರಾದ ಸ.ನ.ನಾಗೇಂದ್ರ, ಅನುರಾಧಆನಂದ್, ಪ್ರೇಸ್ ಸುಬ್ಬರಾಯಪ್ಪ, ರಫೀಕ್, ವೆಂಕಟಾಚಲಪತಿ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಪ.ಪಂ ಸದಸ್ಯರು ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಇದ್ದರು.