

ಶ್ರೀರಂಗಪಟ್ಟಣ: 2024ರ ಪಾರಂಪರಿಕ ದಸರಾ ಆಚರಣೆಯ 2ನೇ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರಧಾನ ಕವಿಗೋಷ್ಠಿ ಹಾಗೂ ವಿಚಾರಗೋಷ್ಠಿಯ ವೇದಿಕೆಯಲ್ಲಿ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ ಎದುರೇ ಮಾತಿನ ಚಕಮಕಿ ನಡೆಯಿತು.
ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದ ಶ್ರೀರಂಗ ವೇದಿಕೆಯಲ್ಲಿ ಶನಿವಾರ ಮಧ್ಯಾಹ್ನ 1ಗಂಟೆಗೆ ಪ್ರಧಾನ ಕವಿಗೋಷ್ಠಿ ಆಯೋಜಿಸಲಾಗಿತ್ತು. ಆದರೆ ವೇದಿಕೆಯಲ್ಲಿ ಸಂಜೆ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಮತ್ತು ತಂಡದಿಂದ ನಡೆಯುವ ಸಂಗೀತ ರಸಸಂಜೆಯ ಪೂರ್ವಸಿದ್ಧತೆಯಾಗಿ ಸಂಗೀತ ವಾದನಗಳು, ಮೈಕ್ ಅಳವಡಿಕೆ ಜತೆಗೆ ಧ್ವನಿವರ್ಧಕ ಮತ್ತು ಬೆಳಕಿನ ಸಾಮಗ್ರಿಗಳ ಸಿದ್ಧತೆ ಪರಿಶೀಲನೆ ಕೈಗೊಂಡು ಮಧ್ಯಾಹ್ನ 2.40 ಕಳೆದರೂ ಕವಿ ಮತ್ತು ಸಾಹಿತಿಗಳಿಗೆ ಗೋಷ್ಠಿ ಆರಂಭಕ್ಕೆ ಅವಕಾಶಕೊಡದ ಹಿನ್ನೆಲೆಯಲ್ಲಿ ನೆರೆದಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲ ಪ್ರಮುಖರು, ಸಾಹಿತಿಗಳು ದಸರಾ ಕಾರ್ಯಕ್ರಮ ವೇದಿಕೆ ಉಸ್ತುವಾರಿ ಮುಖ್ಯಸ್ಥರು ಹಾಗೂ ಸಂಗೀತ ತಂಡದ ಮುಖ್ಯಸ್ಥರನ್ನು ಅಸಮಾಧಾನದಿಂದ ಪ್ರಶ್ನಿಸಿದರು.
ಈ ವೇಳೆ ಸಂಗೀತ ಕಾರ್ಯಕ್ರಮ ತಂಡದ ಮುಖ್ಯಸ್ಥ ನೀವ್ಯಾರು ನನ್ನನ್ನು ಪ್ರಶ್ನಿಸುವಂತಿಲ್ಲ, ಬೇಕಿದ್ದರೆ ಜಿಲ್ಲಾಧಿಕಾರಿ ಅಥವಾ ಶಾಸಕರನ್ನು ಕೇಳಿ, ನಮ್ಮನ್ನೇಕೆ ಪ್ರಶ್ನಿಸುತ್ತೀರಿ ಎಂದು ಸಾಹಿತಿ ಮತ್ತು ಕವಿಗಳಿಗೆ ಉತ್ತರ ನೀಡಿದರು.
ಘಟನೆಯಿಂದ ಜಿಲ್ಲಾ ಹಾಗೂ ತಾಲೂಕು ಆಡಳಿತದ ಉಸ್ತುವಾರಿ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ನೆರೆದಿದ್ದ ನೂರಾರು ಜನರ ಸಮ್ಮುಖದಲ್ಲೇ ಮೈಕಿನಲ್ಲಿ ನಿಮಗೆ ಸಂಗೀತ ಕಾರ್ಯಕ್ರಮವೇ ಹೆಚ್ಚಾದರೇ ಕವಿಗೋಷ್ಠಿ, ವಿಚಾರಗೋಷ್ಠಿ ಹೆಸರಲ್ಲಿ ಕವಿಗಳು ಹಾಗೂ ಸಾಹಿತಿಗಳನ್ನು ಕರೆಸಿ ಬೆಲೆ ಕೊಡದೆ ಅವಮಾನಿಸುವ ನಡೆಯನ್ನು ಬಿಡಬೇಕು. ಇದು ಈ ಬಾರಿ ಮಾತ್ರವಲ್ಲ ಪ್ರತಿ ಬಾರಿಯೂ ಪುನರಾವರ್ತನೆಯಾಗುತ್ತಿದ್ದು, ಇದು ಮುಂದುವರಿದರೆ ವಿವಿಧ ಗೋಷ್ಠಿಗಳನ್ನೇ ಧಿಕ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿ ಅಸಮಾಧಾನ ಹೊರಹಾಕಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸಿದ್ದಲಿಂಗು ಮಾತನಾಡಿ, ಜಿಲ್ಲಾಡಳಿತ ದಸರಾ ಕಾರ್ಯಕ್ರಮ ಹಾಗೂ ವೇದಿಕೆಗಳಲ್ಲಿ ಸ್ಥಳಿಯ ಕಲಾವಿದರು, ಸಾಹಿತಿ ಮತ್ತು ಕವಿಗಳನ್ನು ಅವಮಾನಿಸುತ್ತಿರುವುದು ತರವಲ್ಲ. ಕಾರ್ಯಕ್ರಮಗಳ ಆಯೋಜನೆ ಹಾಗೂ ಭಾಗಿಯಾದವರಿಗೆ ಗೌರವಿಸಲು ಧನ ನೀಡಲು ಸಹ ಜಿಲ್ಲಾಡಳಿತ ಸರಿಯಾದ ಅನುದಾನ ನೀಡದೆ ಕಡೆಗಣಿಸುತ್ತಿರುವುದು ಖಂಡನೀಯ ಎಂದು ಬಹಿರಂಗವಾಗಿಯೇ ವೇದಿಕೆಯಲ್ಲಿ ಅಸಮಾಧಾನ ಹೊರ ಹಾಕಿದರು.
ಈ ವೇಳೆ ವೇದಿಕೆ ಕಡೆಗೆ ಪ್ರಧಾನ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸುತ್ತಿದ್ದ ಕ್ಷೇತ್ರದ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಘಟನೆ ಕಂಡು ವೇದಿಕೆಯ ಮೇಲ್ಭಾಗದ ಆಸನದಲ್ಲಿ ಕೆಲಕಾಲ ಮೌನಕ್ಕೆ ಶರಣಾಗಿ ಕುಳಿತು ಕವಿಗೋಷ್ಠಿ ಉದ್ಘಾಟನೆಯಿಲ್ಲದೆ ಪ್ರಾರಂಭಗೊಂಡ ಬಳಿಕ ಏನೂ ಮಾತನಾಡದೆ ಮತ್ತೆ ವಾಪಸ್ ತೆರಳಿದರು.