

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ, ಪಿಡಿಒ ಹುದ್ದೆಯನ್ನು ಬಿ ಗ್ರೂಪ್ಗೆ ಸೇರ್ಪಡೆಗೊಳಿಸಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶುಕ್ರವಾರದಿಂದ ಅರ್ನಿದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಾಧವನ್ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಬಳಿಕ ಸಂಜೆ ಇಲಾಖೆ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಸಮಸ್ಯೆ ಈಡೇರಿಸುವಂತೆ ಪಿಡಿಒಗಳು ಪಟ್ಟು ಹಿಡಿದಿದ್ದರು. ಆದರೆ, ಸಭೆ ವಿಫಲವಾದ ಬಳಿಕ ಧರಣಿ ಮುಂದುವರಿದಿದೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಕ್ಕೆ ಕಾರ್ಯದರ್ಶಿ, ಲೆಕ್ಕ ಸಹಾಯಕರು, ಕರ ವಸೂಲಿ ಸಿಬ್ಬಂದಿ ಮತ್ತು ಡೇಟಾ ಎಂಟ್ರಿ ಆಪರೇಟರ್ಗಳು ಸಾಥ್ ನೀಡಿದ್ದರು ಪ್ರತಿಭಟನೆಯಲ್ಲಿ ಸಿಬ್ಬಂದಿ ಭಾಗಿಯಾದ ಪರಿಣಾಮ ಗ್ರಾಮ ಪಂಚಾಯಿತಿ ಸೇವೆಗಳು ವ್ಯತ್ಯಯವಾಗುತ್ತಿದೆ.
ನಮ್ಮ ಬೇಡಿಕೆಗಳಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿಲ್ಲ. ಅಧಿಕಾರಿಗಳ ಜತೆ ನಡೆದ ಮಾತುಕತೆ ವಿಫಲವಾಗಿದೆ. ಬೇಡಿಕೆ ಸ್ಪಂದಿಸದಿದ್ದರೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ಪ್ರತಿಭಟನೆ ವಿಸ್ತರಿಸಲಾಗುವುದು ಎಂದು ರಾಜು ವಾರದ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗಿದ್ದರೂ ಪಂಚಾಯಿತಿ ಸಿಬ್ಬಂದಿ ಸಂಖ್ಯೆ ಹೆಚ್ಚುತ್ತಿಲ್ಲ. ಕೆಲಸದೊತ್ತಡದಿಂದ ಅಧಿಕಾರಿಗಳು, ನೌಕರರು ಬಳಲುತ್ತಿದ್ದಾರೆ. ಮೂರು ವರ್ಷಗಳಿಂದ ಖಾಲಿಯಾಗಿರುವ ಪಿಡಿಒ, ಕಾರ್ಯದರ್ಶಿ ಮತ್ತು ಲೆಕ್ಕ ಪರಿಶೋಧಕರ ಹುದ್ದೆ ಭರ್ತಿ ಮಾಡಿಲ್ಲ. ಹಲವು ಬಾರಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರೂ ಸ್ಪಂದನೆ ದೊರೆತಿಲ್ಲ. ಸರ್ಕಾರದಿಂದ ನಮಗೆ ಭರವಸೆ ಸಿಕ್ಕಿಲ್ಲ. ಈ ಧೋರಣೆ ಖಂಡಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ರಾಜು ಹೇಳಿದರು.
ಬಲವಂತದ ನಿಯಮ ಬೇಕಿಲ್ಲ: ಎಲ್ಲ ಪಿಡಿಒ ಹುದ್ದೆಗಳನ್ನು ಗೆಜೆಟೆಡ್ ಬಿ ಗುಂಪಿಗೆ ಉನ್ನತಿಕರಣ ಮಾಡಬೇಕು. ಒಂದೇ ತಾಲೂಕಿನಲ್ಲಿ 7 ವರ್ಷ ಸೇವೆ ಸಲ್ಲಿಸಿದವರನ್ನು ವರ್ಗಾವಣೆ ಮಾಡುವ ನಿಯಮ ಬಲವಂತವಾಗಿ ಹೇರಲಾಗಿದೆ. ಸರ್ಕಾರದ ಒತ್ತಡ ಕಾರ್ಯತಂತ್ರದ ಪರಿಣಾಮ ಈಗಾಗಲೇ 21 ಪಿಡಿಒಗಳ ಜೀವ ಹೋಗಿದೆ. ಇನ್ನೂ ಹಲವು ಪಿಡಿಒಗಳು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿದ್ದಾರೆ. ವರ್ಗಾವಣೆ ನಿಯಮದಲ್ಲಿ ಬದಲಾವಣೆಗೂ ತರುವ ಮುನ್ನ ಸಂದ ಸಲಹೆ ಪಡೆಯಬೇಕು. 7 ವರ್ಷ ಪೂರ್ಣಗೊಂಡಿರುವವರನ್ನು ವರ್ಗಾವಣೆ ಮಾಡುವುದನ್ನು ಕೈಬಿಡಬೇಕು. ಪಂಚಾಯತ್ಗಳಿಗೆ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು. ಪಿಡಿಒ ಜೇಷ್ಠತಾ ಪಟ್ಟಿ ಅಂತಿಮಗೊಳಿಸಿ ಆದೇಶ ಹೊರಡಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಅಧಿಕಾರಿಗಳ, ಸಿಬ್ಬಂದಿ ಭಾಗಿಯಾಗಿದ್ದರು.