

ಬೆಟ್ಟದಪುರ: ಸಾವಿರಾರು ವರ್ಷಗಳ ಸಾಂಸ್ಕೃತಿಕ ಹಿನ್ನೆಲೆಯಿರುವ ಭಾರತದಲ್ಲಿ ವಿಭಿನ್ನ ಸಂಸ್ಕೃತಿಗಳನ್ನು ಕಾಣಬಹುದು. ಈ ವೈವಿಧ್ಯಮಯ ಭಾರತದ ಹಲವು ಮುಖಗಳನ್ನು ಹಾಗೂ ಬಣ್ಣಗಳನ್ನು ಮಕ್ಕಳ ಪ್ರತಿಭಾ ಕಾರಂಜಿಯಲ್ಲಿ ಕಾಣುವಂತಾಗಿದೆ ಎಂದು ಶಿಕ್ಷಣ ಸಂಯೋಜಕ ಕೆ.ಎಂ.ಸ್ವಾಮಿ ತಿಳಿಸಿದರು.
ಬೆಟ್ಟದಪುರದ ಚಾಣಕ್ಯ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮುವ ವೇದಿಕೆಯನ್ನು ಸೃಷ್ಟಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಜಾನಪದ ಕಲೆ, ಸಾಹಿತ್ಯ ಅಪಾರವಾಗಿದ್ದು ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ. ಅದಕ್ಕಾಗಿ ಮಕ್ಕಳು ಸಿಗುವಂತ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗಮನ ಸೆಳೆದ ವೇಷಭೂಷಣ:
ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳು, ಮಾಹಿತಿ, ಸಂಸ್ಕೃತಿ ಸಾರುವಂತಹ ಮಾಡೆಲ್, ವೇಷಭೂಷಣಗಳನ್ನು ತೊಟ್ಟು ಎಲ್ಲರ ಗಮನ ಸೆಳೆದರು. ಇಲ್ಲಿನ ಎಸ್‌ಎಂಎಸ್ ಶಾಲೆಯ ವಿದ್ಯಾರ್ಥಿನಿ ಆರ್.ರನ್ವಿತಾ ಬೇಲೂರಿನ ಶಿಲಾ ಬಾಲಕಿ ವೇಷ ಧರಿಸಿ ಎಲ್ಲರ ಮೆಚ್ಚುಗೆ ಪಡೆದಳು. ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಯದುರಾಜ್, ಕಾರ್ಯದರ್ಶಿ ಜಗದೀಶ್, ನಿರ್ದೇಶಕ ಹರೀಶ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್, ಗುರುರಾಘವೇಂದ್ರ, ಮುಖ್ಯಶಿಕ್ಷಕ ಎಚ್.ಕೆ.ತಿಮ್ಮಯ್ಯ, ಹಾರನಹಳ್ಳಿ ಕೆಪಿಎಸ್ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕೆ.ಸಿ.ಸತೀಶ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.