ಮೂರು ಭಾಗದಲ್ಲಿ ವಚನೋತ್ಸವಕ್ಕೆ ಚಿಂತನೆ

Gangavati Youva Sambra
ಗಂಗಾವತಿ ಐಎಂಎ ಹಾಲ್‌ನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ ಯುವ ಸಂಭ್ರಮ ಸಂಗೀತ ನ್ಯತ್ಯೋತ್ಸವದಲ್ಲಿ ಗಮನಸೆಳೆದ ಪ್ರತಿಭಾ ಕಲಾಕೇಂದ್ರದ ಭರತ ನಾಟ್ಯ ಸಮೂಹ ನೃತ್ಯ.
Published on

ಗಂಗಾವತಿ: ಪ್ರತಿಭೆ ಪ್ರೋತ್ಸಾಹಕ್ಕಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ವಚನೋತ್ಸವ ಹಮ್ಮಿಕೊಳ್ಳುವ ಪ್ರಸ್ತಾವನೆಯಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್.ನರೇಂದ್ರಬಾಬು ಹೇಳಿದರು.

ನಗರದ ಐಎಂಎ ಹಾಲ್‌ನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕಸಾಪ ತಾಲೂಕು ಘಟಕ, ಲಯನ್ಸ್ ಕ್ಲಬ್, ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘ, ಸಿದ್ಧಾರ್ಥ ಎಜುಕೇಷನಲ್ ಆ್ಯಂಡ್ ಸೋಷಿಯಲ್ ವೆಲ್‌ೇರ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯುವ ಸಂಭ್ರಮ ಸಂಗೀತ ನ್ಯತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ಕಲೆ ಮತ್ತು ಕಲಾವಿದರ ಪ್ರೋತ್ಸಾಹಕ್ಕೆ ಅಕಾಡೆಮಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಮೂರು ಭಾಗದಲ್ಲಿ ವಚನೋತ್ಸವ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆದಿದ್ದು, ಶೀಘ್ರವೇ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಪುಸ್ತಕ ಪ್ರಾಧಿಕಾರ ಸದಸ್ಯ ಅಜ್ಮೀರ್ ನಂದಾಪುರ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದು, ನಿರಂತರ 3ತಿಂಗಳ ಕಾಲ ಜಿಲ್ಲಾದ್ಯಂತ ಶಾಲೆ, ಕಾಲೇಜುಗಳಲ್ಲಿ ಆಯೋಜಿಸಲಾಗುವುದು ಎಂದರು.

ಅಕಾಡೆಮಿ ಕಾರ್ಯಕ್ರಮ ಕುರಿತು ಸದಸ್ಯ ರಮೇಶ ಗಬ್ಬೂರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲೆಯ ವಿವಿಧ ಭಾಗದಿಂದ ಬಂದಿದ್ದ ಕಲಾವಿದರಿಂದ ನೃತ್ಯ, ಗಾಯನ, ಸಂಗೀತ ಸುಧೆ ಹಮ್ಮಿಕೊಳ್ಳಲಾಗಿತ್ತು.

ಅಕಾಡೆಮಿ ಸದಸ್ಯರಾದ ಹುಸೇನ್‌ಸಾಬ್ ದಾಸ್, ಡಿ.ದೇವರಾಜು, ಬಿ.ಶಂಕರ ಹೂಗಾರ್ ಲಯನ್ಸ್ ಕ್ಲಬ್ ತಾಲೂಕು ಅಧ್ಯಕ್ಷ ರಾಘವೇಂದ್ರ ಸಿರಿಗೇರಿ, ಪ.ಪೂ.ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ, ಸಂಜ್ಯೋಗಿತಾ ಸಂಸ್ಥೆ ಅಧ್ಯಕ್ಷೆ ಶೈಲಜಾ ಹಿರೇಮಠ, ಟ್ರಸ್ಟ್ ಅಧ್ಯಕ್ಷ ಹುಸೇನಪ್ಪ ಹಂಚಿನಾಳ್ ಇತರರಿದ್ದರು.

ಬಾರದ ಗಣ್ಯರು, ನಿಲ್ಲದ ಕಾರ್ಯಕ್ರಮ

ಶಿಷ್ಟಚಾರದಂತೆ ಸರ್ಕಾರದ ಪ್ರತಿನಿಧಿಗಳನ್ನು ಕಾರ್ಯಕ್ರಮ ಉದ್ಘಾಟನೆಗೆ ಆಹ್ವಾನಿಸಿದರೂ ಸಚಿವ, ಶಾಸಕ ಸೇರಿ ಜನಪ್ರತಿನಿಧಿಗಳು ಬರಲಿಲ್ಲ. 2 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸಂಜೆ 6ಕ್ಕೆ ಶುರುವಾಯಿತು. ಅಕಾಡೆಮಿ ಸದಸ್ಯರು ಮತ್ತು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಆರಂಭಿಸಿದ್ದು, ಮಧ್ಯಾಹ್ನದಿಂದಲೇ ಸಂಗೀತ, ನೃತ್ಯ ಮತ್ತು ಗಾಯನ ಕಾರ್ಯಕ್ರಮ ನಿರಂತರವಾಗಿತ್ತು. ಆಹ್ವಾನಿತರು, ಕಲಾವಿದರು ಮತ್ತು ಕಲಾವಿದರ ಸಂಬಂಧಿಕರು ಹೊರತುಪಡಿಸಿ, ವೀಕ್ಷಕರ ಕೊರತೆಯಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net