ಶರಣ ಸಾಹಿತ್ಯ ರಕ್ಷಣೆ ಇಂದಿನ ಅಗತ್ಯ

1 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಸವಾದಿ ಶರಣರು ಧಾರ್ಮಿಕ ಹಾಗೂ ಸಾಮಾಜಿಕ ಕ್ರಾಂತಿ ಮೂಲಕ ಮಾನವ ಕ್ಷೇತ್ರದ ಶುದ್ಧೀಕರಣ ಮಾಡಲೆತ್ನಿಸಿ ನಿಷ್ಕ್ರಿಯಗೊಂಡ ಸಮಾಜವನ್ನು ಸಕ್ರಿಯಗೊಳಿಸುವಲ್ಲಿ ಕಂಕಣ ಬದ್ಧರಾದರು ಎಂದು ಮುಂಡಗೋಡ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಹೇಳಿದರು.
ನಗರದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬಸವಕೇಂದ್ರ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರಾವಣ ಮಾಸದ ನಿತ್ಯ ವಚನೋತ್ಸವದ ಮಂಗಲೋತ್ಸವ ಹಾಗೂ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ವಚನ ಲೇಖನ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಶರಣರು ತೋರಿದ ಮಾರ್ಗ, ಬೀರಿದ ಬೆಳಕು, ನುಡಿದಂತೆ ನಡೆದ ವಚನಗಳು ಮಾನವನ ಮುನ್ನಡೆಗೆ ಸಹಾಯಕವಾಗಿವೆ. 900 ವರ್ಷದಿಂದ ಪ್ರಚಲಿತವಿರುವ ವಚನ ಸಾಹಿತ್ಯದ ನೈಜ ದರ್ಶನದ ಮುಂದೆ ಯಾವ ದರ್ಶನದ ಅವಶ್ಯಕತೆ ಇಲ್ಲ ಎಂದರು.
ಶಿವಲೀಲಾ ಕುಲಕರ್ಣಿ ಮಾತನಾಡಿ, ವಚನಗಳು ಮಾನವನ ಬದುಕಿನ ಮೌಲ್ಯಗಳು. ಶರಣರ ಸಾಹಿತ್ಯ ರಕ್ಷಣೆ ಇಂದಿನ ಪೀಳಿಗೆಗೆ ಅವಶ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಡಾ.ವೀರಣ್ಣ ರಾಜೂರ ಮಾತನಾಡಿ, ಬಸವಾದಿ ಶರಣರ ಹಾಗೂ ಅವರ ತತ್ವಗಳಿಗೆ ಅಪಾರ್ಥ ಕಲ್ಪಿಸುವುದು, ಅದನ್ನು ಕುಬ್ಜಗೊಳಿಸಿ ಅದರ ವ್ಯಾಪ್ತಿ ಕಡಿಮೆಗೊಳಿಸುವ ಪುಸ್ತಕದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅನೇಕ ವರ್ಷದಿಂದ ಇದನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಆದರೂ 900 ವರ್ಷದಿಂದ ಜೀವಂತವಾಗಿ ಉಳಿದ ಬಂದ ಬದುಕಿನ ಸಾಹಿತ್ಯ ಸೂರ್ಯ ಪ್ರಕಾಶದಂತೆ ಬೆಳಗುತ್ತಲೇ ಇದೆ. ಹೀಗಾಗಿ ಇಂದಿನ ಮಕ್ಕಳು, ಯುವಜನರು ವಚನ ಸಾಹಿತ್ಯ, ಶರಣ ತತ್ವ ಅಳವಡಿಸಿಕೊಂಡು ಅದನ್ನು ಆಚರಿಸುವುದರ ಜೊತೆಗೆ ಶರಣರ ಬದುಕಿನಂತೆ ಬಾಳಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.
ವಚನ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ, ದ್ವೀತಿಯ, ತೃತೀಯ ಬಹುಮಾನ ವಿತರಿಸಲಾಯಿತು. ಬಸವಕೇಂದ್ರ ಅಧ್ಯಕ್ಷ ಸಿದ್ದರಾಮ ನಡಕಟ್ಟಿ, ಉಮೇಶ ಕಟಗಿ, ಶಿವಣ್ಣ ಶರಣ್ಣವರ, ಶಕುಂತಲಾ ಮನ್ನಂಗಿ, ಇತರರು ಇದ್ದರು.
ಶೇಖರ ಕುಂದಗೋಳ ಸ್ವಾಗತಿಸಿದರು. ಬಸವಂತ ತೋಟದ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net