

ಉಳ್ಳಾಲ: ಮಂಗಳೂರು ಉತ್ತರ ಧಕ್ಕೆ ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಜಾತಿ, ಧರ್ಮ ನೋಡದೆ ಕಿಡ್ನಿ ರೋಗಿಗಳ ಡಯಾಲಿಸಿಸ್‌ಗೆ ಮಾಸಿಕ ಸಹಾಯಧನ, ಕ್ಯಾನ್ಸರ್ ಹಾಗೂ ಇತರ ಮಾರಕ ಕಾಯಿಲೆ ಇರುವವರಿಗೆ ಸಹಾಯಧನ ನೀಡುವ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಪುಸ್ತಕ ವಿತರಿಸುವ ಮೂಲಕ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಮಂಗಳೂರು ತಾಪಂ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ಹೇಳಿದರು.
ಮಂಗಳವಾರ ಸಾಧಕ ವಿದ್ಯಾರ್ಥಿಗಳಿಗೆ ಸಂಘದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ವರ್ಷ ವಿದ್ಯಾರ್ಥಿವೇತನ, ಕಾಯಿಲೆ ಪೀಡಿತರು, ನೊಂದ ಮೀನುಗಾರರ ಕುಟುಂಬಕ್ಕೆ ಧನ ಸಹಾಯ ನೀಡಲಾಗುತ್ತಿದೆ. ಈ ಬಾರಿ ಸಾಧಕ 50 ವಿದ್ಯಾರ್ಥಿಗಳಿಗೆ ಹತ್ತು ಸಾವಿರ ನಗದಿನೊಂದಿಗೆ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಗಿದೆ ಎಂದರು.
ಸಲಹೆಗಾರ, ಲೆಕ್ಕ ಪರಿಶೋಧಕ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿದರು. ಸಂಘದ ಅಧ್ಯಕ್ಷ ಜೆ.ಮಹಮ್ಮದ್ ಇಸ್ಹಾಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ನಿರ್ದೇಶಕರಾದ ಯು.ಟಿ.ಅಹ್ಮದ್ ಶರೀಫ್, ಬಿ.ಇಬ್ರಾಹಿಂ ಖಲೀಲ್, ಎಸ್.ಎಂ.ಇಬ್ರಾಹಿಂ, ಟಿ.ಎಚ್.ಹಮೀದ್, ಮುಹಮ್ಮದ್ ಅಶ್ರಫ್, ಎ.ಎಂ.ಕೆ.ಮಹಮ್ಮದ್ ಇಬ್ರಾಹಿಂ, ಬಿ.ಮಹಮ್ಮದ್ ಶಾಲಿ, ಎಂ.ಎ.ಗಫೂರ್, ಎಸ್.ಕೆ.ಇಸ್ಮಾಯಿಲ್, ಎ.ಎನ್.ಆರ್.ಅನ್ವರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.