

ಹಾಸನ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯ ಒಂದು ಕುಟುಂಬವು ಹೊರಗೆ ಉಳಿಯದಂತೆ ನಿಗಾವಹಿಸಿ ಪ್ರತಿಯೊಂದು ಮನೆಗೂ ಸ್ಟಿಕ್ಕರ್ ಅಂಟಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಡಿಯೋ ಸಂವಾದದ ಮೂಲಕ ಭಾನುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು 2025-26ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಹಾಸನ ಜಿಲ್ಲಾದ್ಯಾಂತ ವಿದ್ಯುತ್ ಸಂಪರ್ಕ ಪಡೆದ 5,53,343 ಮನೆಗಳಿಗೂ ಪ್ರಥಮ ಹಂತವಾಗಿ, ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಮೀಟರ್ ರೀಡರ್‌ಗಳಿಂದ ಆರ್.ಆರ್.ನಂಬರ್ ಹೊಂದಿರುವ ಮನೆಗಳನ್ನು ಪಟ್ಟಿ ಮಾಡಿ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಜತೆಗೆ ಜಿಯೋ-ಟ್ಯಾಗಿಂಗ್ ಮಾಡುವ ಕಾರ್ಯವು ಈಗಾಗಲೇ ಪ್ರಾರಂಭವಾಗಿರುತ್ತದೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದರು.
ಹಾಗೆಯೇ ಆರ್.ಆರ್. ನಂಬರ್ ಹೊಂದಿಲ್ಲದೇ ಇರುವ (ವಿದ್ಯುತ್‌ಚ್ಛಕ್ತಿ ಸಂಪರ್ಕವಿಲ್ಲದಿರುವ) ಮನೆಗಳನ್ನು ಪಟ್ಟಿ ಮಾಡಿ, ಅಲೆಮಾರಿ, ಅರೆ ಅಲೆಮಾರಿ, ಜಮೀನುಗಳಲ್ಲಿ ಗುಡಿಸಲು, ಶೆಡ್, ವಲಸೆ ಕಾರ್ಮಿಕರು ಟೆಂಟ್ ಹಾಕಿಕೊಂಡಿರುವುದನ್ನು ಗುರುತಿಸಿ ಪಟ್ಟಿ ಮಾಡಿ ಸ್ಟಿಕ್ಕರ್ ಅಂಟಿಸುವ ಜತೆಗೆ ಜಿಯೋ-ಟ್ಯಾಗಿಂಗ್ ಮಾಡುವ ಕಾರ್ಯವು ಆಗಬೇಕು ಎಂದು ತಿಳಿಸಿದರು. ಮನೆಯ ಮುಖ್ಯ ದ್ವಾರದಲ್ಲಿ ಅಂಟಿಸಿರುವ ಸ್ಟಿಕ್ಕರ್‌ಗಳನ್ನು ಸಾರ್ವಜನಿಕರು ಗಣತಿ ಕಾರ್ಯ ಮುಗಿಯುವವರೆಗೂ ಗೀಚುವುದಾಗಲಿ, ಕಿತ್ತುಹಾಕು ವುದಾಗಲಿ ಮಾಡಬಾರದು ಎಂದು ತಿಳುವಳಿಕೆ ನೀಡಬೇಕು ಎಂದು ನಿರ್ದೇಶನ ನೀಡಿದರು.
ಶಾಲಾ ಮಕ್ಕಳ ಮೂಲಕ ಕೂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಗ್ಗೆ ಪ್ರತಿ ಕುಟುಂಬಗಳಿಗೆ ಮಾಹಿತಿಯನ್ನು ನೀಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗಣತಿದಾರರು ಮನೆಗೆ ಬಂದಾಗ ಮಾಹಿತಿ ನೀಡಲು ಎಲ್ಲಾ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳೊಂದಿಗೆ ಸಿದ್ದರಿರುವಂತೆ ಜನರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ಮನೆ ಮನೆ ಸಮೀಕ್ಷೆಯನ್ನು ಇದೇ ತಿಂಗಳು ಸೆಪ್ಟೆಂಬರ್-22 ರಿಂದ ಅಕ್ಟೋಬರ್-07 ರವರೆಗೆ ಗಣತಿದಾರರು ಮನೆ ಮನೆಗಳಿಗೆ ಭೇಟಿ ನಡೆಸಲಿರುವರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕುಮಾರ್ ಹಾಗೂ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.