

ಸೋಮವಾರಪೇಟೆ: ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ.ಎಂ.ಕಾಂತರಾಜ್ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕೆಂದು ಕರೆ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ತಿಂಗಳ ಕೊನೆಯಲ್ಲಿ ಅಕ್ಕಿ ಸರಬರಾಜಾಗುತ್ತಿದೆ. ಇದರಿಂದಾಗಿ ಆಯಾ ತಿಂಗಳಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಅಕ್ಕಿ ವಿತರಣೆ ಸಾಧ್ಯವಾಗುತ್ತಿಲ್ಲ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಯಲ್ಲಿ ತಿಳಿಸಿದರು.
ತಿಂಗಳ 20ನೇ ತಾರೀಖಿನೊಳಗೆ ಅಕ್ಕಿ ಸರಬರಾಜು ಮಾಡುವಂತೆ ಕ್ರಮ ವಹಿಸಲು ಕೆಡಿಪಿ ಸಭೆಯ ಗಮನ ಸೆಳೆಯಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗೃಹಲಕ್ಷ್ಮಿ ಯೋಜನೆಯಡಿ ಫೆಬ್ರವರಿ ಹಾಗೂ ಮಾರ್ಚ್‌ನ ಹಣ ಸಂದಾಯವಾಗಿಲ್ಲ. ಏಪ್ರಿಲ್ ತಿಂಗಳ ಹಣ ಖಾತೆಗೆ ಜಮೆಯಾಗಿದ್ದು, ಮೇ ತಿಂಗಳ ಕಂತು ಕೆಲವರಿಗೆ ಮಾತ್ರ ಬಾಕಿಯಿದೆ. ಫೆಬ್ರವರಿ ಅಂತ್ಯಕ್ಕೆ 634 ಹೊಸ ಅರ್ಜಿಗಳು ಬಂದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ತಿಳಿಸಿದರು.
ಯುವ ನಿಧಿ ಯೋಜನೆಯಡಿ ಪ್ರತಿ ತಿಂಗಳು ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ನಿರುದ್ಯೋಗಿಗಳ ಖಾತೆಗೆ ಹಣ ಜಮೆಯಾಗುತ್ತಿದೆ ಎಂದು ಅಧಿಕಾರಿ ಮಂಜುನಾಥ್ ಹೇಳಿದರು.
ಮೀಟರ್ ರೀಡಿಂಗ್‌ಗೆ ಬರುವ ಸಂದರ್ಭ ಮನೆ ಬಾಗಿಲು ಹಾಕಿದ್ದರೆ, ಮುಂದಿನ ತಿಂಗಳ ರೀಡಿಂಗ್‌ನಲ್ಲಿ ಎರಡೂ ತಿಂಗಳಿಗೆ ಸೇರಿಸಿ ಒಟ್ಟಿಗೆ ಬಿಲ್ ನೀಡುತ್ತಿರುವುದರಿಂದ ಹಲವಷ್ಟು ಜನರಿಗೆ ಬೇರೆ ದಾರಿಯಿಲ್ಲದೆ ಹಣ ಪಾವತಿ ಮಾಡಬೇಕಿದೆ. ಇದಕ್ಕೆ ಅವಕಾಶ ಕಲ್ಪಿಸದೇ ಒಂದು ವೇಳೆ ಬಾಗಿಲು ಹಾಕಿದ್ದರೆ ಕಳೆದ ತಿಂಗಳ ಸರಾಸರಿ ಬಿಲ್ ಹಾಕಬೇಕು ಎಂದು ಸಭೆಯಲ್ಲಿದ್ದ ಸದಸ್ಯ ಎಸ್.ಎಂ.ಡಿಸಿಲ್ವಾ ಗಮನ ಸೆಳೆದರು.
ಎಲ್ಲ ಗ್ರಾಹಕರು ವಿದ್ಯುತ್ ಮೀಟರ್‌ಗಳನ್ನು ಹೊರಭಾಗದಲ್ಲಿ, ಮೀಟರ್ ರೀಡಿಂಗ್‌ಗೆ ಅನುಕೂಲವಾಗುವಂತೆ ಅಳವಡಿಸಬೇಕೆಂದು ಇಲಾಖೆಯ ನಿರ್ದೇಶನವಿದೆ. ಇದನ್ನು ಎಲ್ಲರೂ ಪಾಲಿಸಿದರೆ ಸಮಸ್ಯೆ ಇರುವುದಿಲ್ಲ ಎಂದು ಅಧಿಕಾರಿ ಯಶಸ್ವಿನಿ ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಶೂನ್ಯ ಬಿಲ್ ಪಡೆಯುತ್ತಿದ್ದವರಿಗೆ ಇದೀಗ ಸರ್ವಿಸ್ ಶುಲ್ಕ ಎಂದು 500 ರಿಂದ 2 ಸಾವಿರಕ್ಕೆ ಬಿಲ್ ಬರುತ್ತಿದೆ ಎಂದು ಶನಿವಾರಸಂತೆಯ ಅಬ್ಬಾಸ್ ಸಭೆಯ ಗಮನ ಸೆಳೆದರು. ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಅಧ್ಯಕ್ಷ ಕಾಂತರಾಜ್ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.
ಶಕ್ತಿ ಯೋಜನೆಯಡಿ ಕಳೆದ ಸಾಲಿನ ಸಭೆಯಲ್ಲಿ ಚರ್ಚೆಯಾದಂತೆ ಮಡಿಕೇರಿ-ಬೆಂಗಳೂರು ಬಸ್ ಹಂಡ್ಲಿಯಲ್ಲಿ ನಿಲುಗಡೆಗೆ ಕ್ರಮ ವಹಿಸಲಾಗಿದೆ. ಹರಗ-ಸೂರ್ಲಬ್ಬಿ-ಶಿರಂಗಳ್ಳಿ ಮಾರ್ಗದಲ್ಲಿ ಬಸ್ ಸಂಚಾರ ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕ ಪರಮೇಶ್ ಹೇಳಿದರು.
ಸೋಮವಾರಪೇಟೆಯಿಂದ ಮಡಿಕೇರಿಗೆ ಬೆಳಗ್ಗೆ ಶಾಲಾ, ಕಾಲೇಜು ಸಮಯದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸದಸ್ಯ ರಾಜು ಮನವಿ ಮಾಡಿದರು. ಭಾನುವಾರದಂದು ತಾಕೇರಿ ಮಾರ್ಗದಲ್ಲಿ ಸರ್ಕಾರಿ ಸಂಚಾರ ಇಲ್ಲದೆ ಇರುವುದರಿಂದ ಸಮಸ್ಯೆಯಾಗಿದೆ ಎಂದು ಸದಸ್ಯ ರಾಜಪ್ಪ ಹೇಳಿದರು. ದುಂಡಳ್ಳಿ, ಮಾದ್ರೆ, ಚಂಗಡಹಳ್ಳಿ ಮಾರ್ಗದಲ್ಲಿ ನೂತನ ಬಸ್ ಮಾರ್ಗ ಅಳವಡಿಸಬೇಕೆಂದು ಸದಸ್ಯ ಅಬ್ಬಾಸ್ ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸಂಬಂಧಿಸಿದ ಇಲಾಖಾಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್, 5 ಇಲಾಖೆಗಳ ಅಧಿಕಾರಿಗಳು, ಸಮಿತಿಯ ಸದಸ್ಯರು ಇದ್ದರು.