ಆರೋಗ್ಯ ಸಮಸ್ಯೆ ತಡೆಗೆ ಮುನ್ನೆಚ್ಚರಿಕೆ ವಹಿಸಿ

RemasterDirector_22abe5b5f
RemasterDirector_22abe5b5f
Published on

ಪಿರಿಯಾಪಟ್ಟಣ: ಬೇಸಿಗೆ ಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗದಂತೆ ಎಚ್ಚರ ವಹಿಸಲು ಆರೋಗ್ಯ ಇಲಾಖೆ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರತಿಯೊಬ್ಬರೂ ಅನುಸರಿಸುವಂತೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಗೋಪಿನಾಥ್ ತಿಳಿಸಿದರು.

ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಈ ಬಾರಿಯ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುವುದನ್ನು ತಪ್ಪಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಕಡ್ಡಾಯ ಪಾಲಿಸುವಂತೆ ತಿಳಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಸೂಚಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಕೆ.ಶ್ರೀನಿವಾಸ್ ಮಾತನಾಡಿ, ಬಿಸಿಲಿನ ಶಾಖದಿಂದ ಆಗುವ ಅಪಾಯಗಳನ್ನು ತಪ್ಪಿಸಲು ಸಾರ್ವಜನಿಕರು ಮನೆಯಿಂದ ಹೊರಗೆ ಹೋದ ಸಂದರ್ಭ ಛತ್ರಿ, ಟೋಪಿ, ಟವಲ್ ಹಾಗೂ ಇತರ ವಿಧಾನಗಳನ್ನು ಬಳಸಬೇಕು ಮತ್ತು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಂದರು.

ಸಭೆಯಲ್ಲಿ ದೊಡ್ಡ ಬೇಲಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿವಾನಂದ್, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ, ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಆರ್.ಪ್ರಕಾಶ್, ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಲಲಿತಾ ಸೇರಿದಂತೆ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net