ಅರೋಗ್ಯದ ಕಾಳಜಿ ವಹಿಸಿ

20KUDLIGI1
ಕೂಡ್ಲಿಗಿ ಬಾಪೂಜಿ ನಗರದಲ್ಲಿ ಆರೋಗ್ಯ ಇಲಾಖೆಯಿಂದ ಲಾರ್ವಾ ಸಮೀಕ್ಷೆ ನಡೆಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ.ಪ್ರದೀಪ್, ಆರೋಗ್ಯ ಇಲಾಖೆ ಸಿಬ್ಬಂದಿ ನಿರಂಜನಮೂರ್ತಿ, ಕಟ್ಟೆ ಬಸಪ್ಪ, ಅವಿನಾಶ್ ಇದ್ದರು.
Published on

ಕೂಡ್ಲಿಗಿ: ಲಾರ್ವಾ ಸಮೀಕ್ಷೆಗೆ ಮನೆ ಮನೆಗೆ ಭೇಟಿ ನೀಡುವ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ.ಪ್ರದೀಪ್ ಹೇಳಿದರು.

ಪಟ್ಟಣದಲ್ಲಿ ಡೆಂಘೆ  ಜ್ವರ ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಶುಕ್ರವಾರ ಮನೆ ಮನೆಗೆ ಭೇಟಿ ನೀಡಿ ನೀರು ಸಂಗ್ರಹ ಪರಿಶೀಲನೆ ನಡೆಸಿ ಮಾತನಾಡಿದರು. ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಿ. ಈಡೀಸ್ ಈಜಿಪೈ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಡೆಂೆ ಹರಡುತ್ತದೆ.

ಈ ಸೊಳ್ಳೆಯ ಜೀವಿತಾವಧಿ ಮೂರ್ನಾಲ್ಕು ವಾರವಿದ್ದು, ನಾಲ್ಕೈದು ಬಾರಿ ಮೊಟ್ಟೆ ಇಡಬಲ್ಲದು. ಒಂದು ಸಲಕ್ಕೆ 100ರಿಂದ 200 ಮೊಟ್ಟೆಗಳಿಡುತ್ತದೆ. ಆಹಾರ ಅವಶ್ಯ ಪೂರೈಸಿಕೊಳ್ಳಲು ಒಬ್ಬರಿಗಿಂತ ಹೆಚ್ಚಿನ ಜನರಿಗೆ ಕಚ್ಚುತ್ತದೆ. ಜನರು ಎಚ್ಚರಿಕೆ ವಹಿಸಬೇಕು ಎಂದರು.

ಮಳೆಗಾಲ ಹಿನ್ನೆಲೆಯಲ್ಲಿ ಡೆಂಘೆ, ಮಲೇರಿಯಾ, ಚಿಕೂನ್‌ಗುನ್ಯಾ ನಿಯಂತ್ರಣಕ್ಕಾಗಿ ನೀರಿನ ಸಂಗ್ರಹಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಒಣಗಿಸಿದ ನಂತರವೇ ನೀರು ತುಂಬಿಸಬೇಕು. ಸೊಳ್ಳೆಗಳು ನುಸುಳದಂತೆ ಮುಚ್ಚಬೇಕು. ಬಯಲಿನಲ್ಲಿ ಟೈರ್, ತೆಂಗಿನಕಾಯಿ ಚಿಪ್ಪು ಹಾಗೂ ಒಡೆದ ಬಾಟಲಿಗಳಲ್ಲಿ ನೀರು ಸಂಗ್ರಹವಾಗದಂತೆ ನಿಗಾ ವಹಿಸಬೇಕು. ಸೊಳ್ಳೆ ನಿರೋಧಕ ಪರದೆ ಬಳಸಬೇಕು. ಜ್ವರ ಬಂದಾಗ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಡಾ.ಎಸ್.ಪಿ.ಪ್ರದೀಪ್ ಸಲಹೆ ನೀಡಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಜಗದೀಶ್, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಸುನೀತಾ, ನಿರಂಜನ ಮೂರ್ತಿ, ಕಟ್ಟೆ ಬಸಪ್ಪ, ಅವಿನಾಶ್, ಅಣ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net