ಕಾಳಜಿ ವಹಿಸಿ ಅಡಕೆ ತೋಟ ನಿರ್ವಹಣೆ ಮಾಡಿ

9sirsi3 (1)
Published on

ಶಿರಸಿ ಈ ವರ್ಷ ಅಡಕೆ ಫಸಲು ಉತ್ತಮವಾಗಿ ಬಂದಿದೆ. ಸದಸ್ಯರು ಆರ್ಥಿಕವಾಗಿ ಉನ್ನತಿ ಹೊಂದಿದ್ದಾರೆ. ಆದರೆ, ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಶಿರಸಿ ಟಿಎಂಎಸ್ ಸೊಸೈಟಿ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ ಹೇಳಿದರು.


ಸಂಸ್ಥೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.


ಅಡಕೆ ಬೆಳೆಗೆ ಎಲೆ ಚುಕ್ಕಿ ರೋಗ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಹರಡುವಿಕೆ ಪ್ರಮಾಣ ಕಡಿಮೆ ಇದ್ದರೂ ರೈತರು ಆದಷ್ಟು ಕಾಳಜಿ ವಹಿಸಿ ಅಡಕೆ ತೋಟದ ನಿರ್ವಹಣೆ ಮಾಡಬೇಕಾಗಿದೆ. ಅಡಕೆ ತೋಟದಲ್ಲಿ ಉಪ ಬೆಳೆಯನ್ನು ಬೆಳೆಯಲು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಇತ್ತೀಚಿನ ದಿನದಲ್ಲಿ ನಮ್ಮ ಭಾಗದಲ್ಲಿಯೂ ಎಲೆ-ಚುಕ್ಕೆ ರೋಗ ಅಡಕೆ ಮರಕ್ಕೆ ಕಾಣಿಸುತ್ತಿದ್ದು, ಈ ರೋಗ ಬಾಧೆ ಕಳಸ, ಕೊಪ್ಪ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿದೆ ಎಂದರು.


ಸದಸ್ಯರಿಗೆ ಅನಾರೋಗ್ಯ ಸಂದರ್ಭದಲ್ಲಿ ನೆರವಾಗುವ ಉದ್ದೇಶದಿಂದ ಪ್ರಾರಂಭಿಸಿದ ಆರೋಗ್ಯ ಸುರಕ್ಷಾ ಯೋಜನೆ ಬಹಳ ಅನುಕೂಲವಾಗಿದೆ. ಈ ವರ್ಷ 429 ಸದಸ್ಯರಿಗೆ 85,86,800 ರೂ. ಸಹಾಯ ನೀಡಲಾಗಿದೆ ಎಂದರು.


2022-23ನೇ ಸಾಲಿನಲಲಿ ಸಂಘದಲ್ಲಿ ಅಡಕೆ, ಕಾಳುಮೆಣಸು ವಿಕ್ರಿ ವಹಿವಾಟು 81,519.75 ಕ್ವಿಂಟಾಲ್​ಗಳಷ್ಟು ಆಗಿದೆ. ಹಸಿ ಅಡಿಕೆ ವಿಕ್ರಿ ಸೇರಿ 1,05,743 ಕ್ವಿಂಟಾಲ್ ವಿಕ್ರಿಯಾಗಿದೆ. ಇದೊಂದು ಹೊಸ ದಾಖಲೆಯಾಗಿದೆ. ಸಂಘವು ಸದಸ್ಯರ ಅವಶ್ಯಕತೆಗಳಿಗನುಗುಣವಾಗಿ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಲಿದೆ ಎಂದರು.


ಉಪಾಧ್ಯಕ್ಷ ಎಂ.ಪಿ. ಹೆಗಡೆ ಹೊನ್ನೆಕಟ್ಟಾ, ನಿರ್ದೇಶಕರಾದ ಜಿ.ಟಿ. ಹೆಗಡೆ ತಟ್ಟೀಸರ, ಜಿ.ಎಂ. ಹೆಗಡೆ ಮುಳಖಂಡ, ವಿ.ಆರ್. ಹೆಗಡೆ ಮಣ್ಮನೆ, ಎನ್.ಡಿ. ಹೆಗಡೆ ಇತರರಿದ್ದರು. ಮುಖ್ಯ ಕಾರ್ಯ ನಿರ್ವಾಹಕ ಎಂ.ಎ . ಹೆಗಡೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net