ಶೂನ್ಯ ಬಡ್ಡಿ ದರದ ಸಾಲ ಸದುಪಯೋಗಪಡಿಸಿಕೊಳ್ಳಿ

24.Pyp..01
Published on

ಪಿರಿಯಾಪಟ್ಟಣ: ಇಲ್ಲಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 20.25 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಆರ್.ಸತೀಶ್‌ಕುಮಾರ್ ತಿಳಿಸಿದರು.

ಪಟ್ಟಣದಲ್ಲಿರುವ ಸಂಘದ ಆವರಣದಲ್ಲಿ ಬುಧವಾರ ನಡೆದ 2024-25 ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಸಾಲಿನಲ್ಲಿ ಸಂಘವು ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ 10.53 ಕೋಟಿ ರೂ. ಸಾಲ ಪಡೆದು ಸಂಘದ ಷೇರುದಾರ ಸದಸ್ಯರಿಗೆ ಅಲ್ಪಾವಧಿ ಸಾಲ ವಿತರಿಸಿದೆ ಎಂದು ತಿಳಿಸಿದರು. ಈ ಪೈಕಿ 2025ರ ಮಾರ್ಚ್ ಅಂತ್ಯದ ವೇಳೆಗೆ ಸಾಲ ಪಡೆದ ಶೇರುದಾರರಿಂದ ಶೇ. 94 ರಷ್ಟು ಸಾಲದ ಹಣ ವಸೂಲಾತಿಯಾಗಿದ್ದು ಜಿಲ್ಲಾ ಬ್ಯಾಂಕಿಗೆ ಶೇ.100 ರಷ್ಟು ಸಾಲದ ಹಣ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರವು ಶೂನ್ಯ ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೆ ರೈತರಿಗೆ ಸಾಲದ ಸೌಲಭ್ಯ ಕಲ್ಪಿಸಿದ್ದು ಈ ಸೌಲಭ್ಯವು ಕೇವಲ ಅಲ್ಪಾವಧಿ ಕೆಸಿಸಿ ಸಾಲಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದರು.

ರೈತರು ಉತ್ಪತ್ತಿಗಿಂತ ಹೆಚ್ಚಿನ ಮಟ್ಟದಲ್ಲಿ ಸಾಲ ಪಡೆಯುತ್ತಿರುವುದರಿಂದ ಮರುಪಾವತಿಗೆ ತೊಂದರೆಯಾಗುತ್ತಿದ್ದು ಶೂನ್ಯ ಬಡ್ಡಿ ದರದ ಸಾಲವನ್ನು ಸದುಪಯೋಗಪಡಿಸಿಕೊಂಡು ಉಳಿತಾಯ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಮನವಿ ಮಾಡಿದರು.

ಸಂಘದ ಸದಸ್ಯರು ಪಡೆದಿರುವ ಸಾಲದ ಹಣವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದಿಂದ ದೊರೆಯಬಹುದಾದ ಇತರ ಸಾಲ ಸೌಲಭ್ಯಗಳನ್ನು ಪಡೆದು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಂಡು ಸಂಘದ ಶ್ರೇಯೋಭಿವೃದ್ಧಿಗೆ ಕಾರಣರಾಗಬೇಕೆಂದು ಮನವಿ ಮಾಡಿದರು.

ಹುಟ್ಟೂರು ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡಿರುವ ಕೃಷಿ ಪತ್ತಿನ ಸಹಕಾರ ಸಂಘದ ಬಗ್ಗೆ ಅಸಮಾಧಾನವ್ಯಕ್ತಪಡಿಸಿದ ಕೆಲವು ಸದಸ್ಯರು ಕಸಬಾ ಸಹಕಾರ ಸಂಘದಿಂದ ಯಾವ ರೈತರೂ ಅಲ್ಲಿಗೇ ವಲಸೆ ಹೋಗಬಾರದೆಂದು ಮನವಿ ಮಾಡಿದರು. ಈ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಕೆಲವು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಆಡಳಿತ ಮಂಡಳಿಯ ನಿರ್ದೇಶಕರು ಎಲ್ಲರನ್ನೂ ಸಮಾಧಾನಪಡಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಆರ್.ಪ್ರವೀಣ್ ಮಾತನಾಡಿ, 2024-25ನೇ ಸಾಲಿನಲ್ಲಿ ಸಂಘದ ಆರ್ಥಿಕ ವಹಿವಾಟು ಮತ್ತು ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ ಸಂಘದ ಷೇರುದಾರರ ನಾಲ್ವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಸಂಘದಲ್ಲಿ ಉತ್ತಮ ಮೊತ್ತದ ಠೇವಣಿಯನ್ನು ಇಟ್ಟಿರುವ ಷೇರುದಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ರಾಮೇಗೌಡ, ನಿರ್ದೇಶಕರಾದ ಎಚ್.ಬಿ.ಸುರೇಶ್, ಪಿ.ಕೆ.ಕುಮಾರ್, ಎಚ್.ಬಿ.ರಮೇಶ್, ವಿ.ಆರ್.ವೆಂಕಟೇಶ್, ಕರಿನಾಯಕ, ಸೈಯದ್ ಜಮೀಲ್, ರಾಮಕೃಷ್ಣ, ಗೀತಾ, ಎಸ್.ಜೆ.ನಳಿನಿ, ಶೋಭಾ, ಸಿಬ್ಬಂದಿ ಸಿ.ಎಂ.ಜ್ಯೋತಿ, ಸಾಗರ್.ಕೆ.ಗೌಡ, ಕುಮಾರಸ್ವಾಮಿ, ಕೆ.ನಾಗರಾಜ್, ಮನೋಹರ್ ಸೇರಿದಂತೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net