

ಸಕಲೇಶಪುರ: ಸಂಘಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಹೈನುಗಾರರು ಆರ್ಥಿಕವಾಗಿ ಸಬಲರಾಗಬೇಕು ಎಂದು ತಾಲೂಕಿನ ಬಾಳ್ಳುಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಬಿ. ಲೋಕೇಶ್ ಹೇಳಿದರು.
ತಾಲೂಕಿನ ಬಾಳ್ಳುಪೇಟೆಯಲ್ಲಿ ಗುರುವಾರ ಬಾಳ್ಳುಪೇಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ಸಂಘ ಈ ಸಾಲಿನಲ್ಲಿ 3,00,302 ರೂ.ಲಾಭ ಗಳಿಸಿದೆ. ಹೈನುಗಾರರು ಹಾಲು ಒಕ್ಕೂಟದಲ್ಲಿ ಬರುವಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಪಿ.ಎಲ್. ನಿಂಗರಾಜು ಮಾತನಾಡಿ, ಬಾಳ್ಳುಪೇಟೆ ಹಾಲು ಉತ್ಪಾದಕರ ಸಂಘ ಉನ್ನತ ಮಟ್ಟಕ್ಕೆ ಬೆಳೆಯಲು ಅಧ್ಯಕ್ಷರು ನಿರ್ದೇಶಕರು ಹಾಗೂ ಸದಸ್ಯರ ಬದ್ಧತೆ ಕಾರಣವಾಗಿದೆ. ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಜಿಲ್ಲಾ ಸಂಘದಿಂದ ಮಾಡಲಾಗುವುದು. ಸಂಘವು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕೆಂದರೆ ದಾನಿಗಳು ಹಾಗೂ ಸರ್ಕಾರದ ಸಹಾಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮಲ್ಲಿ ಶೇಖರಣೆಯಾಗುತ್ತಿರುವ ಹಾಲು ಅಮೆರಿಕಾದಂತಹ ದೇಶಗಳಿಗೆ ರಫ್ತಾಗುತ್ತಿರುವುದು ಸಂತೋಷದ ವಿಷಯ. ಈ ರೀತಿಯ ಬೆಳವಣಿಗೆ ಮುಂದಿನ ದಿನಗಳಲ್ಲಿ ನಮ್ಮ ದೇಶ ಹೈನುಗಾರಿಕೆ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗಣನೀಯ ಸಾಧನೆ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು.
ಪಶು ವೈದ್ಯಾಧಿಕಾರಿ ನಿತ್ಯಾನಂದ ಮಾತನಾಡಿ, ಮುಖ್ಯವಾಗಿ ರೈತರು ವ್ಯಾಕ್ಸಿನ್ ಕೊಡಿಸಬೇಕು. ಹಸು ಆರೋಗ್ಯವಂತವಾಗಿದ್ದರೆ ಮಾತ್ರ ಶುದ್ಧ ಹಾಲು ದೊರೆಯಲು ಸಾಧ್ಯ, ಹಸುಗಳು ವಾಸಿಸುವ ಕೊಟ್ಟಿಗೆಯನ್ನು ದಿನನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹಸುಗಳಿಗೆ ತಗುಲುವ ರೋಗಗಳಿಂದ ದೂರವಿರಿಸಬಹುದು. ಹಸುಗಳಿಗೆ ಓಲೆ ಹಾಕಿಸುವ ಮೂಲಕ ಆಕಸ್ಮಿಕವಾಗಿ ಮೃತಪಟ್ಟ ಹಸುಗಳಿಗೆ 18 ಸಾವಿರ ಪರಿಹಾರ ಧನ ಸಿಗಲಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಹೆಚ್ಚು ಹಾಲು ಉತ್ಪಾದಕರಾದ ಅಬ್ಬನ ಸಂಪತ್, ವಿಕ್ರಂ ಸಕ್ಪಾಲ್, ಮೋಹನ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ನಿರ್ದೇಶಕರಾದ ಎಂ.ಬಿ.ನಾಗೇಶ್, ಎಂ.ಎಸ್.ಧರ್ಮಪ್ರಕಾಶ್, ಎಂ.ಎಂ.ಸತ್ಯ ಪ್ರಕಾಶ್, ಆರ್.ಆನಂದಮೂರ್ತಿ, ಬಿ.ಎಚ್.ಶಂಭುಲಿಂಗ, ವನಿತಾ, ವೀಣಾ, ದೃಶ್ಯಮಣಿ, ಅಣ್ಣಪ್ಪ, ನಿವೃತ್ತ ಶಿಕ್ಷಕ ದಿವಾಕರ್, ಬೆಳಗಾರರ ಸಂಘದ ಮಾಜಿ ಅಧ್ಯಕ್ಷ ಬಿ.ಎನ್.ಬಸವಣ್ಣ, ಗ್ರಾ.ಪಂ ಸದಸ್ಯ ಸಂಜು, ಸಂಘದ ಕಾರ್ಯದರ್ಶಿ ಎಂ.ಆರ್ ಜಯಪ್ರಕಾಶ್ ಸೇರಿದಂತೆ ವಿವಿಧ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಇದ್ದರು.