ಕಾನೂನು ಸೇವೆಗಳ ಸಮಿತಿ ಸದುಪಯೋಗ ಪಡೆದುಕೊಳ್ಳಿ

08M.D.R.4
ಮದ್ದೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಹರಿಣಿ ಚಾಲನೆ ನೀಡಿದರು. ಎಸ್.ಸಿ.ನಳಿನಾ, ಎಂ.ನಾರಾಯಣ್, ಎಂ.ಎನ್.ಶಿವಣ್ಣ, ಎಂ.ಜೆ.ಸುಮಂತ್, ಉಮೇಶ್, ಎಂ.ಕೆ.ಸುಜಾತಾ, ರಾಜೇಶ್ವರಿ, ಜಯಲಕ್ಷ್ಮೀ, ಭಾಗ್ಯಾ ಇದ್ದರು.
Published on

ಮದ್ದೂರು: ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲೆಂಬ ಸದುದ್ದೇಶದಿಂದ ಪ್ರತಿ ನ್ಯಾಯಾಲಯದಲ್ಲಿ ಕಾನೂನು ಸೇವೆಗಳ ಸಮಿತಿಯನ್ನು ರಚನೆ ಮಾಡಿದ್ದು ಇದರ ಸದುಪಯೋಗಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಹರಿಣಿ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪೌಷ್ಟಿಕ ದಿನಾಚರಣೆ ಹಾಗೂ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ, ಬಗ್ಗೆ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಕಾನೂನು ಸೇವಾ ಸಮಿತಿ ರಚನೆ ಮಾಡಿದ್ದು ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರು ಹೆಚ್ಚಿನ ಅರಿವು ಮೂಡಿಸುವುದರ ಮೂಲಕ ಇದರ ಬಳಕೆಗೆ ಕ್ರಮ ವಹಿಸಲು ಅರಿವು ಮೂಡಿಸಬೇಕೆಂದರು.

ಕಾನೂನಾತ್ಮಕವಾಗಿ ಇರುವ ಹಲವು ಸಮಸ್ಯೆಗಳನ್ನು ಜನತಾ ನ್ಯಾಯಾಲಯದ ಮೂಲಕ ಮತ್ತು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದ್ದು, ಕಕ್ಷಿದಾರರು ಮತ್ತು ವಕೀಲರು ಇದರ ಸದುಪಯೋಗಕ್ಕೆ ಕ್ರಮ ವಹಿಸಬೇಕಿದ್ದು ಇದರಿಂದಾಗಿ ನ್ಯಾಯಾಲಯಗಳಿಗೆ ಅಲೆದಾಡುವುದು ತಪ್ಪಲಿದ್ದು ಸಮಯ ಮತ್ತು ಹಣ ಉಳಿತಾಯವಾಗಲಿದೆ ಎಂದರು.

ಮಕ್ಕಳ ಆರೋಗ್ಯ ಬೆಳವಣಿಗೆಗೆ ಸರ್ಕಾರ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ವಿತರಿಸುತ್ತಿದ್ದು ಯಾವುದೇ ತೊಡಕುಂಟಾಗದಂತೆ ಸಮರ್ಪಕವಾಗಿ ಪೂರೈಕೆ ಮಾಡುವುದರ ಮೂಲಕ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಇಲಾಖೆ ಮುಂದಾಗಬೇಕೆಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಸ್.ಸಿ.ನಳಿನಾ, ಸಿಡಿಪಿಒ ಎಂ.ನಾರಾಯಣ್, ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಕಾರ್ಯದರ್ಶಿ ಎಂ.ಜೆ.ಸುಮಂತ್, ಗ್ರೇಡ್-2 ತಹಸೀಲ್ದಾರ್ ಉಮೇಶ್, ಮೇಲ್ವಿಚಾರಕರಾದ ಎಂ.ಕೆ.ಸುಜಾತಾ, ರಾಜೇಶ್ವರಿ, ಜಯಲಕ್ಷ್ಮೀ, ಭಾಗ್ಯಾ, ಶೋಭಾ, ಉಮಾ, ಸುನೀತಾ, ನೇತ್ರಾ, ಅಸಾ ಬಾನು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net