ಸರ್ಕಾರದ ಬಡ್ಡಿ ಮನ್ನಾ ಯೋಜನೆ ಲಾಭ ಪಡೆಯಿರಿ

08arsph1ep
Published on

ಅರಸೀಕೆರೆ: ರಾಜ್ಯ ಸರ್ಕಾರದ ಬಡ್ಡಿ ಮನ್ನಾ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಶಿವಾಳ ಗಂಗಾಧರ್ ಮನವಿ ಮಾಡಿದ್ದಾರೆ.


ಬ್ಯಾಂಕ್ ಕಚೇರಿಯಲ್ಲಿ ಬುಧವಾರ ಫಲಾನುಭವಿಗಳಿಂದ ನಗದು ಸ್ವೀಕರಿಸಿ ಮಾತನಾಡಿದ ಅವರು, ಜಮೀನು ಅಭಿವೃದ್ಧಿ, ಕುರಿ ಸಾಕಣೆ, ಹೈನುಗಾರಿಕೆ, ಟ್ರ್ಯಾಕ್ಟರ್ ಖರೀದಿ, ಕೃಷಿ ಚಟುವಟಿಕೆಗಳಿಗಾಗಿ 437 ರೈತರಿಗೆ ಇದುವರೆಗೂ 2.25 ಕೋಟಿ ರೂ. ಸಾಲ ನೀಡಲಾಗಿತ್ತು. ಆದರೆ ಈ ಪೈಕಿ 387 ಸುಸ್ತಿದಾರರಾಗಿದ್ದು, 6.33 ಕೋಟಿ ರೂ.ಬಡ್ಡಿ ಸಹಿತ ಮರುಪಾವತಿ ಮಾಡಬೇಕಿದೆ ಎಂದರು. ಸಾಲಮನ್ನಾ ಯೋಜನೆಯಿಂದ ಸಾಲಗಾರರು 1.76 ಕೋಟಿ ರೂ. ಅಸಲು ತೀರುವಳಿ ಮಾಡಿದರೆ ಸರ್ಕಾರವೇ ಇನ್ನುಳಿದ 4.57 ಕೋಟಿ ರೂ.ಬಡ್ಡಿ ಮನ್ನಾ ಬಾಬ್ತನ್ನು ಬ್ಯಾಂಕಿಗೆ ತುಂಬಿ ಕೊಡಲಿದೆ. ಬ್ಯಾಂಕ್ ಸಿಬ್ಬಂದಿ ಹಾಗೂ ನಿರ್ದೇಶಕರು ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಮನವರಿಕೆ ಮಾಡಿಕೊಡುತ್ತಿದ್ದಾರೆ. ರೈತರು ತಕ್ಷಣವೇ ತಾವು ಪಡೆದಿರುವ ಅಸಲು ಮರುಪಾವತಿಸಿ ಬಡ್ಡಿ ಮನ್ನಾ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಯಶಸ್ವಿನಿ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ 12,525 ಷೇರುದಾರರಿದ್ದಾರೆ. ಬ್ಯಾಂಕಿನ ಅಭಿವೃದ್ಧಿಯ ಜತೆಗೆ ಅನ್ನದಾತರ ಹಿತಕಾಯಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.


ನಿರ್ದೇಶಕರಾದ ಭೋಜಾನಾಯ್ಕ, ವೈ.ಎಸ್.ಸಿದ್ದೇಶ್, ರವೀಂದ್ರನಾಥ್, ಬೇವಿನಳ್ಳಿ ಯೋಗೀಶ್, ದೇವರಾಜ್, ಕಾರ್ಯದರ್ಶಿ ಚಂದ್ರು ಬಾಲನಾಯ್ಕರ್, ಸಾಲ ವಸೂಲಿ ವಿಶೇಷ ಅಧಿಕಾರಿ ವಸಂತಕುಮಾರಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net