

ಮದ್ದೂರು: ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಮದ್ದೂರಿನ ಧ್ವನಿ ಲಯನ್ಸ್ ಸಂಸ್ಥೆ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ವಾಕ್ ಮತ್ತು ಶ್ರವಣದೋಷ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.
ಶಿಬಿರವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿ ಮಾತನಾಡಿ, ವಾಕ್ ಮತ್ತು ಶ್ರವಣದೋಷವಿದ್ದವರಿಗೆ ಪಟ್ಟಣದಲ್ಲಿ ಉಚಿತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿರುವುದು ಉತ್ತಮ ಕೆಲಸವಾಗಿದ್ದು, ಈ ರೀತಿಯ ಶಿಬಿರಗಳಿಂದ ಅನೇಕ ಜನರಿಗೆ ಉಪಯೋಗವಾಗಲಿದ್ದು ಅಗತ್ಯವಿದ್ದವರು ಶಿಬಿರದ ಪ್ರಯೋಜನ ಪಡೆಯಬೇಕೆಂದರು.
ಧ್ವನಿ ಲಯನ್ಸ್ ತಾಲೂಕು ಅಧ್ಯಕ್ಷೆ ರಜನಿರಾಜ್ ಮಾತನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ ವಾಕ್ ಹಾಗೂ ಶ್ರವಣ ತೊಂದರೆ ಇರುವವರೆಗೆ ಸಂಸ್ಥೆ ವತಿಯಿಂದ ಉಚಿತ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸುಮಾರು 175 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಅಗತ್ಯವಿದ್ದವರಿಗೆ ಶ್ರವಣ ಯಂತ್ರವನ್ನು ನೀಡಲಾಗುವುದು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಧಿಕಾರಿ ಡಾ. ಆಶಾಲತಾ, ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ಧ್ವನಿ ಸಂಸ್ಥೆಯ ಪದಾಧಿಕಾರಿಗಳಾದ ನಿರಂಜನ್, ಶಶಿಧರ್, ಶ್ರೀನಿವಾಸ್, ಬಸವರಾಜು, ರಾಜಶೇಖರ್ ಇದ್ದರು.