

ಬಾಗೂರು: ಹೋಬಳಿ ಕೇಂದ್ರದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆಸಲಾಗುತ್ತಿರುವ ಪೌತಿ ಖಾತೆ ಆಂದೋಲನದಲ್ಲಿ ಸಾರ್ವಜನಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಮನವಿ ಮಾಡಿದರು.
ಹೋಬಳಿ ಕೇಂದ್ರದಲ್ಲಿ ತಾಲೂಕು ಆಡಳಿತ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿದ್ದ ಪೌತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಬಾಗೂರು ಹೋಬಳಿ ಕೇಂದ್ರ ಹೆಚ್ಚು ವಿಸ್ತೀರ್ಣ ಹಾಗೂ ಜನಸಂಖ್ಯೆಯನ್ನು ಹೊಂದಿದೆ. ಪೌತಿ ಖಾತೆ ಆಂದೋಲನವನ್ನು ಬಾಗೂರು ತಾಲೂಕು ಹೋಬಳಿ ಕೇಂದ್ರವನ್ನು ಮೊದಲು ಆಯ್ಕೆ ಮಾಡಿಕೊಳ್ಳಲಾಗಿದೆ. ತಾಲೂಕು ಆಡಳಿತದ ವತಿಯಿಂದ ರೈತರಿಗೆ ತ್ವರಿತಗತಿಯಲ್ಲಿ ಅವರು ಸಲ್ಲಿಸುವ ಮನವಿಗಳಿಗೆ ಸ್ಪಂದಿಸುವಂತೆ ತಿಳಿಸಲಾಗಿದೆ. ಪೌತಿ ಖಾತೆ ಆಂದೋಲದಲ್ಲಿ ಈಗಾಗಲೇ ಸುಮಾರು 122 ಅರ್ಜಿಗಳು ಸಲಿಕೆಯಾಗಿದ್ದು, ತಿದ್ದುಪಡಿಗಾಗಿ 30 ಅರ್ಜಿಗಳನ್ನು ರೈತರು ಈಗಾಗಲೇ ಸಲ್ಲಿಸಿದ್ದಾರೆ. ಸಂಜೆವರೆಗೂ ನಡೆಯುವ ಆಂದೋಲನದಲ್ಲಿ ರೈತರು ಅರ್ಜಿ ಸಲ್ಲಿಸಿ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಹೋಬಳಿ ಕೇಂದ್ರದಲ್ಲಿ ಕುಂದೂರು ಮಠ ರಸ್ತೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಹಿಂಭಾಗ ಸುಮಾರು 5 ಎಕರೆಗೂ ಹೆಚ್ಚು ಸರ್ಕಾರಿ ಜಾಗವಿದ್ದು, ಸುಮಾರು 4 ಎಕರೆಯನ್ನು ಮುರಾರ್ಜಿ ವಸತಿ ಶಾಲೆಗೆ ಮೀಸಲಿಡಲು ತೀರ್ಮಾನಿಸಲಾಗಿದೆ. ಉಳಿದ ಜಾಗವನ್ನು ವಸತಿ ರಹಿತ ಫಲಾನುಭವಿಗಳಿಗೆ ವಿತರಿಸಲು ಚಿಂತನೆ ನಡೆಸಲಾಗಿದೆ ಎಂದರು.
ತಹಸೀಲ್ದಾರ್ ನವೀನ್‌ಕುಮಾರ್ ಮಾತನಾಡಿ, ಕಳೆದ ವರ್ಷ ಸುಮಾರು 1341 ಅರ್ಜಿಗಳನ್ನು ಪೌತಿ ಖಾತೆ ಆಂದೋಲನದಲ್ಲಿ ಸಲ್ಲಿಸಿದರು. ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈ ವರ್ಷ ಸಲ್ಲಿಸುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದರು.
ಮಾಜಿ ಎಪಿಎಂಸಿ ಅಧ್ಯಕ್ಷ ಬಾಗೂರು ಶಿವಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ವೃದ್ಧಾಪ್ಯ ವೇತನ ವಿಧವಾ ವೇತನ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಮಂಜೂರಾತಿ ಪತ್ರವನ್ನು ಶಾಸಕರು ವಿತರಣೆ ಮಾಡಿದರು.
ಬಾಗೂರು ಗ್ರಾಪಂ ಅಧ್ಯಕ್ಷ ಕೆಂಪೇಗೌಡ, ಹೋಬಳಿ ಉಪ ತಹಸೀಲ್ದಾರ್ ಮೋಹನ್, ಕಂದಾಯ ಅಧಿಕಾರಿ ರಾಜು, ಗ್ರಾಪಂ ಸದಸ್ಯರಾದ ರೂಪಾರಘು, ಶಂಕರ್, ವೆಂಕಟೇಶ್, ಅಣ್ಣೇಗೌಡ, ಕಾಳೇಶ್, ಕೃಷಿ ಪತ್ತಿನ ನಿರ್ದೇಶಕ ಹರೀಶ್, ಮುಖಂಡರಾದ ಮರಿ ದೇವೇಗೌಡ, ಗ್ರಾಮ ಲೆಕ್ಕಾಧಿಕಾರಿಗಳಾದ ಹರ್ಷ , ಪವಿತ್ರಾ, ಲಕ್ಷ್ಮೀಕಾಂತ್, ಓಮೇಶ್, ಸುಷ್ಮಾ, ಉಮೇಶ, ಶ್ರೀನಿವಾಸ್, ಪುಟ್ಟರಾಜು, ಸಾರಪ್ಪ, ಸಿಬ್ಬಂದಿ ದ್ರಾಕ್ಷಾಯಿಣಿ ಮಹೇಶ್, ಗ್ರಾಮ ಸಹಾಯಕರು, ಇತರರು ಹಾಜರಿದ್ದರು.