

ಬೆಟ್ಟದಪುರ: ಗ್ರಾಮೀಣ ಬ್ಯಾಂಕಿನಲ್ಲಿ ದೊರೆಯುವ ವಿಮೆ ಹಾಗೂ ಪಿಂಚಣಿ ಸೌಲಭ್ಯಗಳನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಿ ಎಂದು ಯೂನಿಯನ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಪ್ರತಿನಿಧಿ ರೂಪಾ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಜನ ಸುರಕ್ಷಾ ಯೋಜನೆ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಟ್ಟ ಸಮಯದಲ್ಲಿ ಕುಟುಂಬಕ್ಕೆ ಆಸರೆ ಆದವರನ್ನು ನಾವು ಕಳೆದುಕೊಂಡಾಗ ದಿಕ್ಕು ಇಲ್ಲದಂತೆ ಆಗುತ್ತದೆ. ಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಕೊನೆಯಲ್ಲಿ ಆರ್ಥಿಕ ಸಹಾಯ ಮಾಡುವುದು ವಿಮೆ ಯೋಜನೆಗಳು ಮಾತ್ರ. ಹಾಗಾಗಿ ಪ್ರತಿಯೊಬ್ಬರೂ ವಿಮೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ಬೆಟ್ಟದಪುರ ಶಾಖೆಯ ವ್ಯವಸ್ಥಾಪಕ ಬಿ.ಎಸ್.ಸುನೀಲ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷಾ ಭೀಮ ವಿಮೆ ಸೌಲಭ್ಯಗಳು, ಅಟಲ್ ಪಿಂಚಣಿ ಯೋಜನೆ ಹಾಗೂ ಜನ್-ಧನ್ ಖಾತೆ ಸೇರಿದಂತೆ ಹಲವು ಯೋಜನೆಗಳ ಸೌಲಭ್ಯಗಳಿವೆ. ಇವುಗಳ ನೋಂದಣಿಗಾಗಿ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಆಧುನಿಕ ದಿನಗಳಲ್ಲಿ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಿರಬೇಕು. ಅನಧಿಕೃತ ಕರೆಗಳು ಬಂದಾಗ ಯಾವುದೇ ಕಾರಣಕ್ಕೂ ಒಟಿಪಿ ಹಾಗೂ ತಮ್ಮ ಖಾತೆಯ ಯಾವುದೇ ವಿವರಗಳನ್ನು ನೀಡಬಾರದು ಎಂದರು.
ಈ ವೇಳೆ ಬ್ಯಾಂಕಿನ ಸಿಬ್ಬಂದಿಗಳಾದ ರವಿ, ಸುಪ್ರಿಯಾ, ನವೀನ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ, ಮಹಿಳಾ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.