

ಹುಣಸೂರು: ಸತತ ಮಳೆಯಿಂದಾಗಿ ಜನ ಜಾನುವಾರುಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಗೆ ಆದ್ಯತೆ ಮೇಲೆ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ತಹಸೀಲ್ದಾರ್ ಜೆ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಮಳೆಹಾನಿ ಕುರಿತಂತೆ ಪ್ರಕೃತಿ ವಿಕೋಪ ನಿರ್ವಹಣಾ ಕಾರ್ಯಕ್ರಮದಡಿ ಆಯೋಜಿಸಿದ್ದ ಮುಂಜಾಗ್ರತೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ವಾರದಿಂದ ಸತತವಾಗಿ ಮಳೆ ಸುರಿಯುತ್ತಿದೆ. ಕೊಡಗಿನ ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆಯಿಂದಾಗಿ ತಾಲೂಕಿನಲ್ಲಿ ಹರಿಯುವ ಕಾವೇರಿ ಉಪನದಿ ಲಕ್ಷ್ಮಣತೀರ್ಥ ಮೈದುಂಬಿ ಹರಿಯುತ್ತಿದೆ. ಈ ನಡುವೆ ತಾಲೂಕಿನಾದ್ಯಂತ ಸತತ ಮಳೆಯಿಂದಾಗಿ ಬೆಳೆಹಾನಿ, ಮನೆಹಾನಿಯಂತಹ ಪ್ರಕರಣಗಳು ಅಲ್ಲಲ್ಲಿ ಕಂಡುಬರುತ್ತಿವೆ. ಮುಂದಿನ ದಿನಗಳಲ್ಲೂ ಮಳೆ ಮುಂದುವರಿಯುವ ಸಂಭವವನ್ನು ಹವಾಮಾನ ಇಲಾಖೆ ತಿಳಿಸಿದ್ದು, ಅಧಿಕಾರಿಗಳು ಈಗಿಂದಲೇ ಮುಂಜಾಗ್ರತೆ ವಹಿಸಬೇಕೆಂದು ಸೂಚಿಸಿದರು.
ಬೆಳೆಹಾನಿ, ಮನೆಹಾನಿ ಗಮನಿಸಿ: ತಾಲೂಕಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕೃಷಿ ಮಾಡಿದ್ದ ಬೆಳೆಗಳು ಹಾನಿಗೊಳಗಾದಲ್ಲಿ ಆಯಾ ಗ್ರಾ.ಪಂ. ಪಿಡಿಒ, ಆರ್‌ಐ ಮತ್ತು ಪಿಆರ್‌ಡಿ ಇಲಾಖೆ ಇಂಜಿನಿಯರ್ ತಂಡಗಳು ಕೂಡಲೇ ಸಮೀಕ್ಷೆ ನಡೆಸಿ ವರದಿಯನ್ನು ಅಪ್‌ಲೋಡ್ ಮಾಡಬೇಕು. ಪರಿಹಾರ ಪಡೆಯಲು ಜೂ.5ರವರೆಗೆ ಕಾಲಾವಕಾಶವಿದ್ದು, ಅಧಿಕಾರಿಗಳು ವರದಿಯ ಅಪ್‌ಲೋಡ್ ಪ್ರಕ್ರಿಯೆಗಳನ್ನು ಚುರುಕಾಗಿ ನಡೆಸಬೇಕು. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರು ಈ ಕುರಿತು ಗಮನಹರಿಸಬೇಕು. ಮಳೆಯಿಂದಾಗಿ ಮನೆ ಆಸ್ತಿಪಾಸ್ತಿ ಹಾನಿಯಾಗಿದ್ದರೆ ಪಿಡಿಒ ಮತ್ತು ಕಂದಾಯ ಅಧಿಕಾರಿಗಳು ವರದಿಯನ್ನು ಆಯಾ ದಿನವೇ ಕಂದಾಯ ಇಲಾಖೆಗೆ ಸಲ್ಲಿಸಬೇಕು. ಜಾನುವಾರುಗಳು ದುರ್ಮರಣಗೊಂಡಲ್ಲಿ ಪಶು ಸಂಗೋಪನಾ ಮತ್ತು ಪಶುಪಾಲನ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ಕೈಗೊಂಡು ವರದಿ ಸಲ್ಲಿಸುವ ಮೂಲಕ ರೈತರಿಗೆ ಪರಿಹಾರ ಧನ ಪಡೆಯಲು ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.
ಶಾಲಾ ಕಟ್ಟಡಗಳ ದುಸ್ಥಿತಿ ಗಮನಿಸಿ: ಇನ್ನೆರಡು ಮೂರು ದಿನಗಳಲ್ಲಿ ಶಾಲಾ, ಕಾಲೇಜುಗಳು ಆರಂಭಗೊಳ್ಳಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಕುರಿತು ಮಾಹಿತಿ ಕಲೆಹಾಕಿ ನೀಡಬೇಕು. ಅಂಗನವಾಡಿ ಕೇಂದ್ರಗಳ ಪರಿಸ್ಥಿತಿಯ ಕುರಿತು ಮಾಹಿತಿ ನೀಡುವುದು ಅಗತ್ಯವೆಂದರು.
ನೀರು ಕಲುಷಿತಗೊಳ್ಳದಂತೆ ಕ್ರಮವಹಿಸಿರಿ: ಗ್ರಾಮಗಳಲ್ಲಿ ಮತ್ತು ನಗರವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಸೇರದಂತೆ ಗಮನಿಸಬೇಕು. ಹುಣಸೂರು ನಗರವ್ಯಾಪ್ತಿಯ ಮಂಜುನಾಥ ಬಡಾವಣೆ ಮುಂತಾದ ಕಡೆಗಳಲ್ಲಿ ಮಳೆ ನೀರಿನ ಪ್ರವಾಹದಿಂದ ಅನಾಹುತವಾಗದಂತೆ ಕ್ರಮವಹಿಸಬೇಕೆಂದು ಪೌರಾಯುಕ್ತರಿಗೆ ಸೂಚಿಸಿದರು. ಕಲುಷಿತ ನೀರಿನ ಸೇವೆಯಿಂದಾಗಿ ಆರೋಗ್ಯದಲ್ಲಿ ಏರುಪೇರಾಗಲಿದ್ದು, ಈ ಕುರಿತು ಗ್ರಾ.ಪಂ.ಗಳು ಮತ್ತು ನಗರಸಭೆ ಕಟ್ಟೆಚ್ಚರ ವಹಿಸಬೇಕೆಂದು ಸೂಚಿಸಿದರು. ಸೆಸ್ಕ್ ನಿಗಮದ ಅಧಿಕಾರಿಗಳು ದುಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳ ಬದಲಾವಣೆ, ಮರದ ರಂಬೆಗಳು ಅಡ್ಡವಾಗಿದ್ದರೆ ಅವುಗಳ ತೆರವು ಕಾರ್ ಶೀಘ್ರ ಕೈಗೊಳ್ಳಬೇಕು. ಸೆಸ್ಕ್ ಮತ್ತು ಅರಣ್ಯ ಇಲಾಖೆ ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಅಗ್ನಿಶಾಮಕದಳದ ಸಿಬ್ಬಂದಿ ಪ್ರವಾಹದಂತಹ ಪರಿಸ್ಥಿತಿಯನ್ನು ಎದುರಿಸಲು ಸರ್ವ ಸನ್ನದ್ಧರಾಗಿರಬೇಕು ಎಂದು ತಿಳಿಸಿದರು.
5 ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ
ಈ ಹಿಂದಿನ ಮಳೆ ಹಾವಳಿಯಿಂದ ತಾಲೂಕಿನಲ್ಲಿ ಗುರುತಿಸಿಕೊಂಡಿರುವ 6 ಗ್ರಾಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಹನಗೋಡು ಹೋಬಳಿ ವ್ಯಾಪ್ತಿಯ ಶಿಂಡೇನಹಳ್ಳಿ, ಬಿಲ್ಲೇನಹೊಸಳ್ಳಿ, ಕೋಣನ ಹೊಸಹಳ್ಳಿ, ಕಸಬಾ ಹೋಬಳಿ ವ್ಯಾಪ್ತಿಯ ನಿಲುವಾಗಿಲು, ರಾಮಪಟ್ಟಣ ಮತ್ತು ದೊಡ್ಡಹುಣಸೂರು ಗ್ರಾಮಗಳಲ್ಲಿ ಪ್ರವಾಹದ ಸಂಕಷ್ಟಗಳನ್ನು ಎದುರಿಸಿದ್ದು, ಮುಂದಿನ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾದರೆ ಸ್ಥಳಾಂತರಕ್ಕೆ ಅಗತ್ಯ ಕಾಳಜಿ ಕೇಂದ್ರಗಳನ್ನು ಗುರುತಿಸಿ ಸಿದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್, ತೋಟಗಾರಿಕೆ ಎಡಿ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್, ಸೆಸ್ಕ್ ನಿಗಮದ ಎಇಇಗಳು, ಪೌರಾಯುಕ್ತೆ ಕೆ.ಮಾನಸ, ಪರಿಸರ ಇಂಜಿನಿಯರ್ ಸೌಮ್ಯಾ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮುಖ್ಯಸ್ಥರು ಭಾಗವಹಿಸಿದ್ದರು.