ಡೆಂಘೆ ನಿಯಂತ್ರಣಕ್ಕೆ ಕ್ರಮ ವಹಿಸಿ

7skpp1 dengue
ಸಕಲೇಶಪುರದ ತಾ.ಪಂ. ಸಭಾಂಗಣದಲ್ಲಿ ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ನಡೆದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಡೆಂಘೆ ನಿಯಂತ್ರಣ ಕಾರ್ಯಾಗಾರವನ್ನು ಗಣ್ಯರು ಗಿಡಕ್ಕೆ ನೀರು ಹಾಕುವ ಮುಖಾಂತರ ಉದ್ಘಾಟಿಸಿದರು. ಡಾ.ನಾಗಪ್ಪ, ರಾಮಕೃಷ್ಣ, ಹರೀಶ್, ಆದಿತ್ಯ ಇದ್ದರು.
Published on

ಸಕಲೇಶಪುರ: ಜಿಲ್ಲೆಯಲ್ಲಿ 152 ಡೆಂಘೆ ಪ್ರಕರಣಗಳು ಪತ್ತೆಯಾಗಿದ್ದು, ರೋಗ ನಿಯಂತ್ರಣಕ್ಕೆ ಪಿಡಿಒಗಳು ಮುಂದಾಗಬೇಕೆಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಅಧಿಕಾರಿ ಡಾ.ನಾಗಪ್ಪ ಹೇಳಿದರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಡೆಂಘೆ ನಿಯಂತ್ರಣ ಕಾರ್ಯಾಗಾರದಲ್ಲಿ ಮಾತನಾಡಿದರು. ಮನುಕುಲಕ್ಕೆ ಅತಿ ಹೆಚ್ಚು ಜೀವ ಹಾನಿ ಮಾಡುತ್ತಿರುವ ಕೀಟವೆಂದರೆ ಸೊಳ್ಳೆ, ಸೊಳ್ಳೆಯಿಂದ ಹಲವು ಮಾರಣಾಂತಿಕ ರೋಗಗಳು ಹೆಚ್ಚಾಗುತ್ತಿದ್ದು, ಅದರಲ್ಲಿ ಡೆಂಘೆ ಸಹ ಒಂದಾಗಿದೆ. ಸೊಳ್ಳೆಯಂತಹ ಕೀಟಗಳು ಮನುಷ್ಯನ ರಕ್ತ ಹೀರುವ ಮುಖಾಂತರ ರೋಗಗಳ ಹರಡುವಿಕೆಗೆ ಕಾರಣವಾಗಿದೆ. ಮಲೇರಿಯಾ ಅಂತಹ ಕಾಯಿಲೆಗಳು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಆದರೆ ಡೆಂಘೆ ಪ್ರಕರಣದಲ್ಲಿ ಒಂದೇ ಸೊಳ್ಳೆ ಹಲವು ಜನರಿಗೆ ಕಚ್ಚುವುದರಿಂದ ರೋಗ ಹರಡಲು ಕಾರಣವಾಗಿದೆ ಎಂದರು.

ಮನುಷ್ಯ ಆರೋಗ್ಯವಾಗಿರಬೇಕಾದರೆ ಆರೋಗ್ಯಯುತ ವಾತಾವರಣವನ್ನು ಸೃಷ್ಟಿ ಮಾಡಬೇಕು. ಡೆಂಘೆ ಸೊಳ್ಳೆ ನೀರು ನಿಲ್ಲುವಂತಹ ಪ್ರದೇಶಗಳಲ್ಲಿ ಹೆಚ್ಚು ಉತ್ಪಾದನೆಯಾಗುವುದರಿಂದ ನೀರು ನಿಲ್ಲುವುದನ್ನು ನಿಯಂತ್ರಣ ಮಾಡಿ ಈ ರೀತಿಯ ಮಾರಣಾಂತಿಕ ಕಾಯಿಲೆಯನ್ನು ತಡೆಯಬಹುದು. ಡೆಂಘೆ ಪ್ರಕರಣಗಳು ಈ ಹಿಂದೆ ನಗರ ಪ್ರದೇಶಗಳಲ್ಲಿ ಕಾಣಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲೂ ಕಂಡು ಬರುತ್ತಿದೆ. ಮನೆಗಳ ಸಮೀಪ ಕೊಳಚೆ ನೀರು ನಿಲ್ಲುತ್ತಿದ್ದರೆ ಪಿಡಿಒಗಳು ಜನರಿಗೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಹಾಗೂ ಪ್ರತಿ ಪಂಚಾಯಿತಿಯಲ್ಲಿ ಜನಜಾಗೃತಿ ಮೂಡಿಸಲು ಮುಂದಾಗಬೇಕು ಹಾಗೂ ಜ್ವರ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಲು ಜನರಿಗೆ ಸೂಚಿಸಬೇಕು ಎಂದರು.

ತಾ.ಪಂ. ಇಒ ರಾಮಕೃಷ್ಣ, ತಾ.ಪಂ ಸಹಾಯಕ ನಿರ್ದೇಶಕರಾದ ಹರೀಶ್, ಆದಿತ್ಯ ಹಾಗೂ ಕೀಟ ತಜ್ಞ ರಾಜೇಶ್ ಕುಲಕರ್ಣಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಾಣಿ, ಬಾಳಪ್ಪ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net