ಜನ, ಜಾನುವಾರು ಕುಡಿಯುವ ನೀರಿಗೆ ಕ್ರಮ ಕೈಗೊಳ್ಳಿ

SRP_12-02jpj
Published on

ಶ್ರೀರಂಗಪಟ್ಟಣ: ಪ್ರಸ್ತುತ ಬೇಸಿಗೆಯ ಝಳ ಹೆಚ್ಚಿದ್ದು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಾಕೀತು ಮಾಡಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಸೋಮವಾರ ಕ್ಷೇತ್ರದ ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲೂಕಿನ ಟಾಸ್ಕ್‌ಫೋರ್ಸ್‌ನ ಜಂಟಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಬೇಸಿಗೆಯ ಕಾರಣ ಸಾಕಷ್ಟು ಸಮಸ್ಯೆಗಳು ನಮಗೆ ಸವಾಲಾಗಿ ಪರಿಣಮಿಸಲಿವೆ. ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ನಿರ್ವಹಣೆ ಮಾಡುವುದು ನಮ್ಮ ಮೊದಲ ಆದ್ಯತೆ. ಜಲಾಶಯದಲ್ಲಿನ ನೀರಿನ ಪರಿಸ್ಥಿತಿಗೆ ಅನುಗುಣವಾಗಿ ಜನರಿಗೆ ತ್ವರಿತವಾಗಿ ಪೂರೈಸುವುದು. ಇನ್ನು ಅಂತರ್ಜಲದಲ್ಲಿ ನೀರಿನ ಲಭ್ಯತೆಗೆ ತಕ್ಕಂತೆ ಬೋರ್‌ವೆಲ್ ಮೂಲಕ ಪೂರೈಸಿ ಕ್ರಮಕೈಗೊಳ್ಳಿ. ಪ್ರಸ್ತುತ ವಾತಾವರಣ ಧೂಳು ಹಾಗೂ ಕಲುಷಿತ ಗಾಳಿಯಿಂದ ಕೂಡಿದ್ದು, ಜನರು ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಆರೋಗ್ಯದ ಕಡೆ ಗಮನವಹಿಸಲು ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಆರೋಗ್ಯ ಸಿಬ್ಬಂದಿ ಕ್ರಮವಹಿಸಿ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜನರನ್ನು ಜಾಗೃತಗೊಳಿಸಿ ಎಂದರು.


ಉಳಿದಂತೆ ಕ್ಷೇತ್ರದ ಯಾವುದೇ ಗ್ರಾಮಗಳಲ್ಲಿ ಪ್ರಾಕೃತಿಕ ಹಾನಿಯಿಂದ ಮನೆ ಕಳೆದುಕೊಂಡವರ ಪರಿಹಾರ ಬಿಡುಗಡೆಗೊಳಿಸಿ ಮನೆ ನಿರ್ಮಿಸಿಕೊಳ್ಳಲು ಸಹಕರಿಸಿ ಎಂದು ಈ ವೇಳೆ ಸೂಚನೆ ನೀಡಿದರು.


ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೇಣು, ಉಪ ತಹಸೀಲ್ದಾರ್ ಆದರ್ಶ್, ಮಂಡ್ಯ ತಾಲೂಕು ಪಂಚಾಯಿತಿ ಇಒ ರಾಜೇಶ್, ತಹಸೀಲ್ದಾರ್ ಚಂದ್ರಶೇಖರ್ ಬೀರಾದರ್ ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು, ರಾಜಸ್ವ ನೀರಿಕ್ಷಕರು, ಕಂದಾಯ ಇಲಾಖೆ ನೌಕರರು, ಪಿಡಿಒಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net