

ಹಾಸನ: ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗಾಗಿ ಪ್ರತಿ ತಾಲೂಕಿನಲ್ಲಿ ದುರ್ಬಲ ಸ್ಥಳಗಳನ್ನು ಗುರುತಿಸಿ ಅಗತ್ಯ ಕ್ರಿಯಾ ಯೋಜನೆ ತಯಾರಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಅನಿರೀಕ್ಷಿತ ಹಾಗೂ ಆಕಸ್ಮಿಕವಾಗಿ ಸಂಭವಿಸಬಹುದಾದ ಅವಘಡಗಳನ್ನು ತಡೆಯಲು ಮುನ್ನೆಚ್ಚರಿಕೆ ವಹಿಸಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಉದಾಸಿನ ಮಾಡಿ ಯಾವುದೇ ವಿಷಯವನ್ನು ಲಘುವಾಗಿ ತೆಗೆದುಕೊಳ್ಳದೆ ಗಂಭೀರವಾಗಿ ಪರಿಗಣಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತುರ್ತು ಸಂದರ್ಭಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕಮ್ಯುನಿಕೇಷನ್ ಪ್ಲಾನ್ ಮಾಡಿಕೊಳ್ಳಿ ಎಂದರಲ್ಲದೆ, ಅಗತ್ಯ ಪರಿಕರ ದಾಸ್ತಾನು ಇರುವಂತೆ ನೋಡಿಕೊಳ್ಳಿ, ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ-75ರಲ್ಲಿ ವಾಹನಗಳ ಸಂಚಾರಕ್ಕೆ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ತಿಳಿಸಿದರು. ನಿರಂತರವಾಗಿ ಮಳೆ ಬಿಳುತ್ತಿರುವುದರಿಂದ ಎಚ್ಚರ ವಹಿಸಿ 15 ದಿನಗಳು ಪ್ರತಿದಿನ ಸ್ಥಳೀಯ ತಂಡ ಗಮನಹರಿಸಿ ಎಂದ ಅವರು, ಪ್ರತಿ ತಾಲೂಕಿನಲ್ಲಿ ಕಂಟ್ರೋಲ್ ರೂಂ ತೆರೆಯಬೇಕು, ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳನ್ನು ಬಳಸಿಕೊಂಡು ಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಬೀಳುವ ಹಂತದಲ್ಲಿರುವ ಮರಗಳನ್ನು ಗುರುತಿಸಿ ತೆರವಿಗೆ ಅಗತ್ಯ ಕ್ರಮವಹಿಸಿ, ಹೆದ್ದಾರಿಯಲ್ಲಿ ವಾಹನ ಚಾಲನೆಗೆ ಅನುಕೂಲವಾಗುವಂತೆ ಸೂಚನಾ ಫಲಕಗಳು ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ಗಮನಹರಿಸಿ. ಅಧಿಕ ಮಳೆ ಬೀಳುತ್ತಿರುವ ಸಂದರ್ಭದಲ್ಲಿ ಬದಲಿ ಮಾರ್ಗ ಬಳಸಲು ಪ್ರಯಾಣಿಕರಿಗೆ ಉತ್ತೇಜಿಸಬೇಕು ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್, ಅಪರ ಜಿಲ್ಲಾಧಿಕಾರಿ ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ತಮ್ಮಯ್ಯ, ಉಪ ವಿಭಾಗಾಧಿಕಾರಿ ಮಾರುತಿ, ರಾಜೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.