ಸುಳ್ಳು ಆರೋಪ ಮಾಡುವವರ ವಿರುದ್ಧ ಕ್ರಮವಹಿಸಿ

ಸುಳ್ಳು ಆರೋಪ ಮಾಡುವವರ ವಿರುದ್ಧ ಕ್ರಮವಹಿಸಿ
Published on

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ವಾಸವಿರುವ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ನಿವೇಶನ ಕೊಡಬಾರದೆಂದು ಆಗ್ರಹಿಸಿ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿರುವವರ ವಿರುದ್ಧ ಕ್ರಮವಹಿಸುವಂತೆ ಕಟ್ಟೆಮಳಲವಾಡಿ ಗ್ರಾಮದ ಅಲೆಮಾರಿ ಕುಟುಂಬದವರು ಶುಕ್ರವಾರ ತಹಸೀಲ್ದಾರ್ ಜೆ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಲೆಮಾರಿ ಕುಟುಂಬದ ಶಿವು, ಕಟ್ಟೆಮಳವಾಡಿ ಗ್ರಾಮದ ಹಾರಂಗಿ ದಂಡೆಯ ಪಕ್ಕದ ಗ್ರಾಮ ಠಾಣೆಯಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಕಳೆದ 40 ವರ್ಷಗಳಿಂದಲೂ ವಾಸ ಮಾಡುತ್ತಿದ್ದೇವೆ. ನಮ್ಮ ಹಿರಿಯರಿಗೆ ಏಳು ಮನೆಗಳನ್ನು ಗಿರಿಜನ ಕಲ್ಯಾಣ ಇಲಾಖೆ ವತಿಯಿಂದ ಕಟ್ಟಿಸಿ ಕೊಟ್ಟಿರುತ್ತಾರೆ. ಉಳಿದ ಕುಟುಂಬಗಳು ಗುಡಿಸಲುಗಳನ್ನು ಹಾಕಿಕೊಂಡು ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಅತ್ಯಂತ ಸಂಕಷ್ಟದ ಜೀವನವನ್ನು ಸಾಗಿಸುತ್ತಿದ್ದೇವೆ. ಕಟ್ಟೆಮಳಲವಾಡಿ ಗ್ರಾಮ ಪಂಚಾಯಿತಿ ವತಿಯಿಂದ ವಿದ್ಯುತ್ ದೀಪ, ಕುಡಿಯುವ ನೀರು ಸೌಲಭ್ಯಗಳನ್ನು ಹಾಕಿಸಿ ಕೊಟ್ಟಿರುತ್ತಾರೆ. ಉಳಿದ ಯಾವುದೇ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿರುವುದಿಲ್ಲ. ವಸತಿ ಸೌಲಭ್ಯ ಕಲ್ಪಿಸಲು ಗ್ರಾ.ಪಂ.ಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಕಟ್ಟೆ ಮಲಳವಾಡಿ ಗ್ರಾಮದ ಕೆಲವು ಮುಖಂಡರು ನಮ್ಮ ಮೇಲೆ ಕಳ್ಳತನ ಮಾಡುತ್ತಾರೆ, ಗಾಂಜಾ ಮಾರಾಟ ಮಾಡುತ್ತಾರೆ ಎಂದು ಸುಳ್ಳು ಹೇಳುತ್ತಾರೆ, ಗ್ರಾಮದಲ್ಲಿ ಅಶಾಂತಿ ಉಂಟು ಮಾಡುತ್ತಾರೆ ಮತ್ತು ಅಕ್ರಮ ಚಟುವಟಿಕೆಗಳನ್ನು ಎಸಗುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಗೆ ನಾವು ಕಳ್ಳತನ ಮಾಡುತ್ತಿದ್ದೇವೆ, ಅಕ್ರಮ ಮಾಡುತ್ತಿದ್ದೇವೆ ಎನ್ನುವುದಾದರೆ ನಮ್ಮಗಳ ಮೇಲೆ ಪೊಲೀಸರಿಂದಲೇ ಕ್ರಮವಾಗಲಿ. ಇಲ್ಲದಿದ್ದರೆ ನಮ್ಮಗಳ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ಮುಖಂಡರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲೆಮಾರಿ ಕುಟುಂಬದ ಗೌರಿ, ರಾಜಮ್ಮ ಮುಂತಾದವರು ತಮ್ಮ ಅಳಲನ್ನು ತೋಡಿಕೊಂಡರು. ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಜೆ.ಮಂಜುನಾಥ್ ಈ ಬಗ್ಗೆ ದೂರು ಪ್ರತಿದೂರುಗಳು ಬರುತ್ತಿದ್ದು, ನನ್ನ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಸ್ಥಳ ತನಿಖೆಗೆ ಕಳುಹಿಸಿ ಸತ್ಯಾಸತ್ಯತೆಯನ್ನು ಕೂಲಂಕಶವಾಗಿ ಪರಿಶೀಲಿಸಿ ನಿಜವಾದ ಬಡ ಕುಟುಂಬಗಳಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮನವಿ ಸಲ್ಲಿಕೆ ವೇಳೆ ದಲಿತ ಮುಖಂಡರಾದ ನಿಂಗರಾಜ್ ಮಲ್ಲಾಡಿ, ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಚಿಲ್ಕುಂದ ವೇಣುಗೋಪಾಲ, ಕಟ್ಟೆಮಳಲವಾಡಿ ಗ್ರಾಮ ಪಂಚಾಯಿತಿ ಸದಸ್ಯ ಆಂಜನೇಯ, ಎಸ್.ಗಣೇಶ, ಮಾಜಿ ಸದಸ್ಯ ದೇವರಾಜು, ಮುಖಂಡರಾದ ತಾಂಡುಮೂರ್ತಿ, ವೆಂಕಟೇಶ, ಸತೀಶ, ಗಣೇಶ, ಪ್ರಭಾಕರ, ನಾಗಮ್ಮ ಶಿವ, ಲಕ್ಷ್ಮೀ, ಮಂಗಳ, ಮಲ್ಲಿಗೆ, ವೆಲ್ಲಿಯಮ್ಮ ರಾಧಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net