ಸಿಂಧನೂರು: ಪ್ರಕರಣವೊಂದಕ್ಕೆ ಸಂಬಂಧಿಸಿ ಹಿರಿಯ ವಕೀಲ ಶೇಖರಪ್ಪ ದುಮತಿ ಅವರಿಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸುವುದು ಹಾಗೂ ಕುಮ್ಮಕ್ಕು ನೀಡಿದ ಪೊಲೀಸ್ ಪೇದೆ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ ಒತ್ತಾಯಿಸಿದರು.
ಇದನ್ನೂ ಓದಿ:ಕತ್ತಿನಲ್ಲಿದ್ದ ಸರ ಕಿತ್ತು ಹಾಕಿ ಜೀವ ಬೆದರಿಕೆ
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಂಧನೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಳಗಾನೂರು ಪೊಲೀಸ್ ಪೇದೆ ಮಂಜುನಾಥ ಅವರ ಕುಮ್ಮಕ್ಕಿನಿಂದ ವ್ಯಕ್ತಿಯೊಬ್ಬ ವಕೀಲ ಶೇಖರಪ್ಪ ಮೊಬೈಲ್‌ಗೆ ನಿರಂತರ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧನೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ಎಎಸ್‌ಐ ವೀರೇಶ ವಿಚಾರಿಸದೆ ಹಿಂಬರಹ ನೀಡಿದರು. ನಂತರ ಒತ್ತಾಯಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರನ್ನೂ ಅಮಾನತು ಮಾಡಬೇಕು ಎಂದು ಆಗ್ರಹಿಸಿದ ಅವರು, ಆರೋಪಿಗಳ ಪರವಾಗಿ ಸಿಂಧನೂರಿನ ಯಾವ ವಕೀಲರೂ ನ್ಯಾಯಾಲಯದಲ್ಲಿ ವಾದ ಮಂಡಿಸದಂತೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ವಕೀಲ ಶೇಖರಪ್ಪ ದುಮತಿ ಮಾತನಾಡಿ, ಪೊಲೀಸರು ಹಾಗೂ ದುರುಗಪ್ಪ ಎಂಬುವರು ಸೇರಿ ಇತರರ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಕ್ಷಿದಾರರ ಪರವಾಗಿ ನಾನು ನ್ಯಾಯಾಲಯದಲ್ಲಿ ಪ್ರಕರಣ ನಡೆಸುತ್ತಿದ್ದೇನೆ. ಇದೇ ಕಾರಣಕ್ಕೆ ಬಳಗಾನೂರು ಪೊಲೀಸ್ ಠಾಣೆ ಮಂಜುನಾಥ ಕುಮ್ಮಕ್ಕಿನಿಂದ ವ್ಯಕ್ತಿಯೊಬ್ಬ ನಿರಂತರ ಕರೆ ಮಾಡಿ ನನಗೆ ಹಾಗೂ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾನೆ. ಎಸ್ಪಿ ಅವರಿಗೂ ಈ ಕುರಿತು ತಿಳಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂಘದ ಖಜಾಂಚಿ ಶರಣಬಸವ ಉಮಲೂಟಿ, ವಕೀಲರಾದ ಎಚ್.ರಾಮನಗೌಡ, ಜಿ.ಎಸ್.ಆರ್.ಕೆ.ರೆಡ್ಡಿ, ಕೆ.ಭೀಮನಗೌಡ, ಅಬ್ದುಲ್‌ಗನಿ, ಆರ್.ಕೆ.ನಾಗರಾಜ, ಜಗದೀಶ, ಖಾಜಿಮಲಿಕ್, ನಿರುಪಾದೆಪ್ಪ, ಕೆ.ರಾಜು ಇತರರಿದ್ದರು.