

ಬೆಂಗಳೂರು: ಆನ್‌ಲೈನ್ ಔಷಧ ಮಾರಾಟ ವೇದಿಕೆಗಳು ಹಾಗೂ ಕೆಲ ನವೋದ್ಯಮಗಳು ಔಷಧಗಳನ್ನು ಮರು ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದು, ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಭಾರತೀಯ ಔಷಧ ಮಹಾನಿಯಂತ್ರಕರಿಗೆ (ಡಿಸಿಜಿಐ) ಬೆಂಗಳೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ (ಬಿಡಿಸಿಡಿಎ)ಪತ್ರ ಬರೆದಿದೆ.
ಸ್ಟ್ರಿಪ್‌ಗಳಲ್ಲಿರುವ ಮಾತ್ರೆಗಳನ್ನು ಮರುಪ್ಯಾಕಿಂಗ್ ಮಾಡಿ ಮಾರಾಟ ಮಾಡಲಾಡುತ್ತಿದೆ. ಇದು ಕಾಂತಿವರ್ಧಕ ಕಾಯ್ದೆಯ ನಿಯಮಗಳ ಉಲ್ಲಂಘನೆಯಾಗಿದ್ದು, ಇದರಿಂದ ಔಷಧದ ವಿವರ ಲಭ್ಯವಾಗುವುದಿಲ್ಲ. ಬದಲಿಗೆ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ತರಲಿದೆ. ಇಂತಹ ಕಾನೂನುಬಾಹಿರ ಕಾರ್ಯಗಳನ್ನು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಡಿಸಿಡಿಎ ಅಧ್ಯಕ್ಷ ಬಿ. ತಿರುನಾವುಕ್ಕರಸು ಒತ್ತಾಯಿಸಿದ್ದಾರೆ.
ಈ ರೀತಿ ಕ್ರಮದಿಂದ ಬ್ಯಾಚ್ ಸಂಖ್ಯೆ, ಔಷಧದ ಅವಧಿ ಮುಕ್ತಾಯದ ಮಾಹಿತಿ, ಗರಿಷ್ಠ ಮಾರಾಟ ದರ ಸೇರಿ ಯಾವುದೇ ವಿವಿರಗಳು ರೋಗಿಗೆ ಲಭ್ಯವಾಗುವುದಿಲ್ಲ. ಇದರಿಂದ ಔಷಧ ವ್ಯವಸ್ಥೆಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿ, ಜನರು ವಿಶ್ವಾಸಾರ್ಹತೆ ಕಳೆದುಕೊಳ್ಳುವ ಸಾಧ್ಯತೆ ಇದೆ. ವೈದ್ಯರ ಚೀಟಿ ಇಲ್ಲದೆಯೂ ಆಲ್‌ನೈನ್ ವೇದಿಕೆಗಳಲ್ಲಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಶೇ. 50 ರಿಯಾಯಿತಿ ಎಂಬ ಜಾಹೀರಾತುಗಳನ್ನು ನೀಡಿ, ಜನರ ದಿಕ್ಕನ್ನು ತಪ್ಪಿಸುವ ಕಾರ್ಯ ನಡೆಯುತ್ತಿದೆ. ಹಾಗಾಗಿ ರೋಗಿಯ ಆರೋಗ್ಯದ ದೃಷ್ಟಿಯಿಂದ ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎಂದು ಕೋರಿದ್ದಾರೆ.