ನಗರಸಭೆ ಅಧಿಕಾರಿಗಳು, ಲೇಔಟ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ

11arsph1ep
Published on

ಅರಸೀಕೆರೆ: ಅಗತ್ಯ ಮೂಲಸೌಕರ್ಯ ಕಲ್ಪಿಸದೆ ಖಾತೆ ಬಿಡುಗಡೆ ಮಾಡಿರುವ ನಗರಸಭೆ ಅಧಿಕಾರಿಗಳು ಹಾಗೂ ನಿವೇಶನ ಹಂಚಿರುವ ಲೇಔಟ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಾಲಾಜಿ ಬಡಾವಣೆಯ ನಿವಾಸಿಗಳು ಬುಧವಾರ ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.


ಚೌಡೇಶ್ವರಿನಗರಕ್ಕೆ ಹೊಂದಿಕೊಂಡಂತೆ 2018ರಲ್ಲಿ ಸುನಂದಾ ಶಶಿಧರ್ ಎಂಬುವವರು ಸರ್ವೇ ನಂ.24/2ರಲ್ಲಿ ಒಂದು ಎಕರೆ ಹನ್ನೊಂದು ಗುಂಟೆ ಭೂಮಿಯನ್ನು ವಸತಿ ಬಡಾವಣೆ ನಿರ್ಮಿಸಲು ನಗರಸಭೆ ಅಧಿಕಾರಿಗಳಿಂದ ಅನುಮತಿ ಪಡೆದಿದ್ದಾರೆ. ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ ಮಾಡಿಲ್ಲ. ಯುಜಿಡಿ ಸಂಪರ್ಕ ಎಲ್ಲಿ ಕಲ್ಪಿಸಿದ್ದಾರೆಂಬುದೇ ತಿಳಿಯುತ್ತಿಲ್ಲ. ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ನೀಡದಿರುವುದರಿಂದ ಕತ್ತಲೆಯಲ್ಲಿಯೇ ಬದುಕು ಕಳೆಯುವಂತಾಗಿದೆ. ಖಾಲಿ ಇರುವ ನಿವೇಶನಗಳಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದಿದಿದ್ದು ಹಾವು, ಹಂದಿ, ಚೇಳುಗಳಿಗೆ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದು ನಮ್ಮ ಗೋಳು ಹೇಳತೀರದಾಗಿದೆ ಎಂದು ದೂರಿದರು.


ಬಡಾವಣೆಗೆ ಮಾಲೀಕರು ಸೌಜನ್ಯಕ್ಕೂ ತಿರುಗಿ ನೋಡುತ್ತಿಲ್ಲ. ತರಾತುರಿಯಲ್ಲಿ ಅನುಮತಿ ನೀಡಿ ಕೈ ತೊಳೆದುಕೊಂಡಿರುವ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ. ಮೂರ‌್ನಾಲ್ಕು ವರ್ಷದಿಂದ ಸಮಸ್ಯೆ ಬಿಗಡಾಯಿಸಿದ್ದು ಶಾಶ್ವತ ಪರಿಹಾರ ನೀಡುವ ಜತೆಗೆ ಅನಗತ್ಯ ತೊಂದರೆ ನೀಡುತ್ತಿರುವ ಲೇಔಟ್ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕು. ಯಾವುದೇ ಕಾರಣಕ್ಕೂ ಇಂತಹ ವ್ಯಕ್ತಿಗಳಿಗೆ ಬಡಾವಣೆ ನಿರ್ಮಿಸಲು ಅವಕಾಶ ನೀಡಬಾರದು ಎಂದು ಜಯಮ್ಮ, ನಾಗರತ್ನ, ಪ್ರೀತಿ ಇನ್ನಿತರರು ಸಿ.ಗಿರೀಶ್ ಅವರನ್ನು ಒತ್ತಾಯಿಸಿದರು. ಧನಲಕ್ಷ್ಮೀ , ಹನುಮ, ಯಶೋದಾ, ಯೋಗಿತಾ ಇನ್ನಿತರರಿದ್ದರು.


ನಗರ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಶೇ.80ಬಡಾವಣೆಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಲ್ಲ ಎನ್ನುವ ದೂರುಗಳು ಪದೇ ಪದೆ ಸಾರ್ವಜನಿಕರಿಂದ ಕೇಳಿಬರುತ್ತಿವೆ. ನಗರಸಭೆ ಅಧಿಕಾರಿಗಳು ಯಾವ ಮಾನದಂಡ ಆಧರಿಸಿ ಅನುಮತಿ ನೀಡಿದ್ದಾರೆ ತಿಳಿಯದು. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಯೋಜನಾ ನಿರ್ದೇಶಕರ ಗಮನಕ್ಕೆ ತಂದು ಅಗತ್ಯ ಕ್ರಮ ವಹಿಸುವುದಾಗಿ ಮನವಿ ಮಾಡಲು ಬಂದಿದ್ದವರಿಗೆ ಸಿ.ಗಿರೀಶ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net