

* ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ
* ಮೂರೆಕರೆಯಲ್ಲಿ ಸಮಗ್ರ ಕೃಷಿ ಹನಿ ನೀರಾವರಿಗೆ ಒತ್ತು
ಮನೆಯಲ್ಲೇ ಜೀವಾಮೃತ ತಯಾರಿ
ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ಹೊಸ ಹೊಸ ಪ್ರಯೋಗಗಳ ಮೂಲಕ ಸಮಗ್ರ ಕೃಷಿ ಅವಲಂಬಿಸಿ ತೈವಾನ್ ಸೀಬೆ ಬೆಳೆಯುವ ಮೂಲಕ ಕೃಷಿಯಲ್ಲಿ ಯಶಸ್ಸಿನ ಮೆಟ್ಟಿಲು ಏರಿ ಖುಷಿ ಕಾಣುತ್ತಿರುವ ರೈತ ಎಸ್.ಕಾಂತರಾಜು.
ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಅಂಕನಹಳ್ಳಿ ರೈತ ಎಸ್.ಕಾಂತರಾಜು ಪ್ರಮುಖವಾಗಿ ರೇಷ್ಮೆ, ಹೈನುಗಾರಿಕೆ, ಮಾವು ಬೆಳೆಯುತ್ತಾರೆ. ಇದರ ಜತೆಗೆ ಮಿಶ್ರ ಬೇಸಾಯ ಪದ್ಧತಿಯಲ್ಲಿ ರಾಗಿ, ಹುರುಳಿ, ಜೋಳ, ತೊಗರಿ ಬೆಳೆಯುತ್ತಿದ್ದಾರೆ.
ಕೃಷಿಯಲ್ಲೇ ಜೀವನ ಕಟ್ಟಿಕೊಂಡಿರುವ ಇವರು, ತಮಗಿರುವ ಮೂರು ಎಕರೆ ಜಮೀನಿನಲ್ಲಿ ತಂದೆ, ತಾಯಿ, ಪತ್ನಿ, ಮಕ್ಕಳ ಸಹಕಾರದಲ್ಲಿ ಕೃಷಿ ನಡೆಸುತ್ತಿದ್ದಾರೆ. ತಮ್ಮ ಕೃಷಿ ಜತೆಗೆ ಸಾವಯವ ಕೃಷಿ ಅನುಸರಿಸಿ ಜಿಲ್ಲೆಯಲ್ಲಿ ಅಪರೂಪವಾಗಿರುವ ತೈವಾನ್ ಸೀಬೆ (ತಿಳಿ ನೀಲಿ) ಲೈಟ್‌ಪಿಂಕ್ ಸೂಪರ್ ಗೋಲ್ಡ್ ವಾಣಿಜ್ಯ ಬೆಳೆ ಬೆಳೆಯುವ ಮೂಲಕ ಉತ್ತಮ ಸೀಬೆ ಸಲು ಕೈಹಿಡಿದಿದ್ದು, ಲಾಭದತ್ತ ಮುಖ ಮಾಡಿ ಕೃಷಿಯಲ್ಲಿ ಮನಸ್ಸು ಮಾಡಿದರೆ ಯಶಸ್ಸು ಸಾಧಿಸಿ ತೋರಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.
ನೀರಾವರಿಗೆ ಒಂದು ಬೋರ್‌ವೆಲ್ ಕೊರೆಸಿಕೊಂಡಿರುವ ಇವರು ತೆಂಗು, ಮಾವು, ರಾಗಿ, ಹುರುಳಿ, ರೇಷ್ಮೆ ವ್ಯವಸಾಯ ನಡೆಸುತ್ತಾ ಬಂದಿದ್ದರು. ಕಳೆದ 1 ವರ್ಷದ ಹಿಂದೆ ಸೀಬೆ ಕೃಷಿಗೆ ಮುಂದಡಿ ಇಟ್ಟಿದ್ದು ಸೀಬೆ ಸಲು ತೋಟದಲ್ಲಿ ನಳನಳಿಸುತ್ತಿದೆ.
ತೈವಾನ್ ಸೀಬೆ ಕೃಷಿ ಅಪರೂಪ. ಅದರಲ್ಲೂ ರಾಮನಗರ ಜಿಲ್ಲೆಯಲ್ಲಿ ಬೆರಳಣಿಕೆ ರೈತರು ಅದರತ್ತ ಚಿತ್ತ ಹರಿಸಿದ್ದಾರೆ. ರೈತ ಎಸ್.ಕಾಂತರಾಜು ಅವರು ಸರ್ಕಾರದ ಕೃಷಿ ಇಲಾಖೆ, ನರೇಗಾ, ತೋಟಗಾರಿಕೆ ಯೋಜನೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಕಳೆದ ಒಂದು ವರ್ಷಗಳಿಂದ ಮುಕ್ಕಾಲು ಎಕರೆ ಜಮೀನಿನಲ್ಲಿ 600 ಸೀಬೆ ಗಿಡದ ವಿಶೇಷ ಬೆಳೆ ಬೆಳೆಯುವ ಮೂಲಕ ಕೃಷಿ ಚಟುವಟಿಕೆ ಪ್ರಾರಂಭಿಸಿ ಇಂದು ತನ್ನ ಜಮೀನಿನಲ್ಲಿ ತೈವಾನ್ ಸೀಬೆ ಬೆಳೆದು ನಿಲ್ಲುವಂತೆ ಯಶಸ್ವಿ ಕಂಡಿದ್ದಾರೆ.
ಮೂರು ಎಕರೆ ಜಮೀನಿದ್ದರೂ ಇವರ ಜಮೀನಿನಲ್ಲಿ ರೇಷ್ಮೆ, ಮಾವು, ತೆಂಗು, ಉರುಳಿ, ರಾಗಿ, ಜೋಳ, ತರಕಾರಿ, ಜಾನುವಾರು ಮೇವು, ಕಿತ್ತಲೆ, ಸಪೋಟ, ಮೂಸಂಬಿ, ಬೆಟ್ಟದನೆಲ್ಲಿ, ನಿಂಬೆ, ಖರ್ಜೂರ ಗಿಡ, ಕಾಳು ಮೆಣಸು, ಹಲಸು, ನುಗ್ಗೆ, ಡ್ರಾೃಗನ್ ಪ್ರೂಟ್, ನೇರಳೆ ಹೀಗೆ ಹತ್ತಾರು ಬೆಳೆಗಳಿವೆ. ಇದರ ಜತೆಗೆ ಜಮೀನಿನ ಇಕ್ಕೆಲಗಳಲ್ಲಿ ಬೇವು, ಅರ್ಕಿಲಸ್ ಸೇರಿ ಅರಣ್ಯ ಕೃಷಿ ಮರಗಳು ಇವೆ.
ವಿಶೇಷವಾಗಿ ತೈವಾನ್ ತಿಳಿನೀಲಿ ಸೀಬೆ ಬೆಳೆದು ಸ್ವತಃ ಮಾರುಕಟ್ಟೆ ಮಾಡಿಕೊಂಡು ಬೇಡಿಕೆ ಬರುವಂತೆ ಮಾಡುವಲ್ಲಿಯೂ ಮೊದಲ ಬಾರಿಗೆ ಯಶಸ್ಸು ಕಂಡಿದ್ದಾರೆ. ಕಳೆದ ಹದಿನೈದು ದಿನಗಳಿಂದಲೂ ಕೊಯ್ಲು ಮಾಡಿದ್ದು, ಮೊದಲ ಹಂತದಲ್ಲೇ ಕಳೆದ ವಾರ ಸುಮಾರು 350 ಕೆ.ಜಿ. ಹಣ್ಣು ಮಾರಾಟವಾಗಿತ್ತು. ಈ ವಾರ ಎರಡನೇ ಕೊಯ್ಲಿನಲ್ಲಿ ಸುಮಾರು 450 ಕೆ.ಜಿ. ಹಣ್ಣು ಮಾರಾಟ ಮಾಡಿದ್ದೇವೆ. ಕೆ.ಜಿ.ಗೆ 90ರೂನಂತೆ ದರ ಸಿಗುತ್ತಿದೆ. ದಪ್ಪ ಗಾತ್ರದ ಕಾಯಿಗಳು ಆಕರ್ಷಣೀಯವಾಗಿದ್ದು ರುಚಿಕರವಾಗಿದೆ ಎನ್ನುತ್ತಾರೆ ರೈತ ಕಾಂತರಾಜು.
ರೇಷ್ಮೆ, ಸೀಬೆ ಮತ್ತು ತೆಂಗು ಬೆಳೆ ಕೃಷಿಗೆ ಹನಿ ನೀರಾವರಿ ಅಳವಡಿಸಿ ವ್ಯವಸಾಯ ಮಾಡಲಾಗುತ್ತಿದೆ. ಇದರಿಂದ ನೀರಿನ ಬವಣೆ ತಪ್ಪಿದೆ. ತೆಗೆ ಮಾವು ಮರಗಳಿಗೆ ನರೇಗಾ ಯೋಜನೆಯಲ್ಲಿ ಬದು ನಿರ್ಮಾಣ ಮಾಡಲಾಗಿದೆ. ರೈತ ಕಾಂತರಾಜು ಹೈನುಗಾರಿಕೆಯಲ್ಲೂ ನಿರತರಾಗಿದ್ದು, ನಾಲ್ಕು ಹಸು ಸಾಕಣೆ ಮಾಡಿ ಉತ್ತಮ ಹಾಲು ಉತ್ಪಾದಿಸಿ ಲಾ‘ ಕಾಣುತ್ತಿದ್ದಾರೆ. ಜತೆಗೆ ಮೇಕೆ ಸಾಕಣಿಕೆಯೂ ನಡೆಸುತ್ತಿದ್ದಾರೆ. ಮಾವು ಒಂದು ಎಕರೆ, ಸೀಬೆ 30 ಗುಂಟೆ, ತೆಂಗು ಇನ್ನಿತರ ಬೆಳೆಗಳನ್ನು ಒಂದು ಕಾಲು ಎಕರೆ ಪ್ರದೇಶದಲ್ಲಿ ಮಿಶ್ರ ಬೇಸಾಯ ಪದ್ದತಿಯಲ್ಲಿ ಬೆಳೆಯಲಾಗುತ್ತಿದೆ.