ಆನ್‌ಲೈನ್ ವಹಿವಾಟಿನಿಂದ ಟೈಲರ್‌ಗಳಿಗೆ ಬೇಡಿಕೆ ಕ್ಷೀಣ

29Kush002
Published on

ಕುಶಾಲನಗರ: ಆನ್‌ಲೈನ್ ವಹಿವಾಟು ಹೆಚ್ಚಳದಿಂದ ಟೈಲರ್‌ಗಳಿಗೆ ಬೇಡಿಕೆ ಕ್ಷೀಣಿಸುತ್ತಿದೆ ಎಂದು ಟೈಲರ್ಸ್ ಅಸೋಸಿಯೇಷನ್ ಕೊಡಗು ಜಿಲ್ಲಾಧ್ಯಕ್ಷ ಶೇಖ್ ಅಹಮ್ಮದ್ ಬೇಸರ ವ್ಯಕ್ತಪಡಿಸಿದರು.


ಕುಶಾಲನಗರದ ಮಹಿಳಾ ಸಮಾಜ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕುಶಾಲನಗರ ವಲಯ ಸಮಿತಿ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
1999-2000ನೇ ಇಸವಿಯಲ್ಲಿ ಉಲ್ಲಾಳದಲ್ಲಿ ಆರಂಭವಾದ ಸಂಘಟನೆ ಇಂದು ರಾಜ್ಯಾದ್ಯಂತ ವಿಸ್ತರಿಸಿದೆ. ಸಂಘಟನೆ ರಜತಮಹೋತ್ಸವ ಆಚರಣೆಗೆ ಸಿದ್ಧವಾಗಿದ್ದರೂ ನಮ್ಮ ಬೇಡಿಕೆಗಳನ್ನು ಯಾವುದೇ ಸರ್ಕಾರ ಈಡೇರಿಸಿಲ್ಲ. ಆನ್‌ಲೈನ್ ವಹಿವಾಟು ಕಾರಣದಿಂದ ಟೈಲರ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಸಂಘಟಿತರಾಗುವ ಮೂಲಕ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕಿದೆ. ಸಂಘಟನೆಗೆ 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಮಾವೇಶದಲ್ಲಿ ನಮ್ಮ ಶಕ್ತಿ ಪ್ರದರ್ಶನದ ಮೂಲಕ ಸರ್ಕಾರದ ಗಮನ ಸೆಳೆಯಬೇಕಿದೆ ಎಂದು ಹೇಳಿದರು.


ಸಂಘದ ಮಾಜಿ ಅಧ್ಯಕ್ಷ ನಂದೀಶ್ ಮಾತನಾಡಿ, ಟೈಲರ್‌ಗಳ ಸ್ಥಿತಿ ಉತ್ತಮವಾಗಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ನಮ್ಮಲ್ಲೂ ಪೈಪೋಟಿ ಹೆಚ್ಚಾಗುತ್ತಿದೆ. ಟೈಲರಿಂಗ್ ಕ್ಷೇತ್ರದಲ್ಲಿನ ಸಮಸ್ಯೆಗಳ ಕಾರಣದಿಂದ ಯುವಕರು ದೂರವಾಗುತ್ತಿದ್ದಾರೆ ಎಂದರು.


ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ.ಮಂತರ್‌ಗೌಡ ಅಸೋಸಿಯೇಷನ್ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಅಸೋಸಿಯೇಷನ್ ಪದಾಧಿಕಾರಿಗಳು ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಬಳಿಕ ಮಾತನಾಡಿದ ಅವರು, ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಭರವಸೆ ನೀಡಿದರು.


ಕುಶಾಲನಗರ ವಲಯ ಸಮಿತಿ ಅಧ್ಯಕ್ಷೆ ಭವಾನಿ ಲೋಕೇಶ್, ಕೆಎಸ್‌ಟಿಎ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕುಶಾಲನಗರ ವಲಯ ಸಮಿತಿ ಗೌರವಾಧ್ಯಕ್ಷ ಕೆ.ಎಂ.ವಿಜಯ, ಪ್ರಧಾನ ಕಾರ್ಯದರ್ಶಿ ಸಂಧ್ಯಾ ಕಾವೇರಪ್ಪ, ಸದಸ್ಯೆ ಸಪ್ನಾ, ಸೋಮವಾರಪೇಟೆ ಸಮಿತಿ ಗೌರವಾಧ್ಯಕ್ಷ ಬಿ.ಎನ್.ಮಂಜುನಾಥ್, ಮಡಿಕೇರಿ ಸಮಿತಿ ಅಧ್ಯಕ್ಷ ಸಂಜೀವ, ಗೋಣಿಕೊಪ್ಪ ಸಮಿತಿ ಅಧ್ಯಕ್ಷೆ ಅಬಿಬುನಿಸಾ, ಭಾಗಮಂಡಲ ಸಮಿತಿ ಅಧ್ಯಕ್ಷ ನಾಗೇಂದ್ರ, ಮಡಿಕೇರಿ ಸಮಿತಿ ಅಧ್ಯಕ್ಷೆ ಜುಲೆಕಾಬಿ, ಮೂರ್ನಾಡು ಸಮಿತಿ ಅಧ್ಯಕ್ಷೆ ತುಳಸಿ, ಕುಶಾಲನಗರ ಸಮಿತಿ ಉಪಾಧ್ಯಕ್ಷ ನಾಗರಾಜು, ಖಜಾಂಚಿ ಫೈರೋಜ್ ಅಹಮ್ಮದ್, ಸಂಘಟನಾ ಕಾರ್ಯದರ್ಶಿ ಶಾರದಾ, ಜಯಂತ್, ಸಲಹೆಗಾರರಾದ ರೊನಾಲ್, ನಿಸಾರ್ ಅಹಮದ್ ಇದ್ದರು. ಸಭೆಯ ಆರಂಭದಲ್ಲಿ ಮೃತ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net