ರಸಗೊಬ್ಬರ ಮಾರಾಟ ಮಳಿಗೆಗಳಿಗೆ ತಹಸೀಲ್ದಾರ್ ಭೇಟಿ

08M.D.R.7
Published on

ಮದ್ದೂರು: ತಾಲೂಕಿನ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಗುರುವಾರ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಗೋದಾಮು ಸೇರಿದಂತೆ ಖಾಸಗಿ ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಅಂಗಡಿ ಮಾಲೀಕರಿಂದ ಗೊಬ್ಬರ ದಾಸ್ತಾನು, ದರ ಮತ್ತು ಇನ್ನಿತರ ಮಾಹಿತಿಗಳನ್ನು ಪಡೆದುಕೊಂಡು ಅಗತ್ಯ ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದರು.

ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಪ್ರತಿನಿತ್ಯ ದಾಸ್ತಾನು ಪ್ರಮಾಣ, ಸಗಟು ಮತ್ತು ಚಿಲ್ಲರೆ ದರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಿದ ಅಧಿಕಾರಿಗಳು, ದರಪಟ್ಟಿ ನಮೂದಿಸದ ಕೆಲ ವರ್ತಕರನ್ನು ತರಾಟೆಗೆ ತೆಗೆದುಕೊಂಡು ಕಾನೂನು ಕ್ರಮದ ಎಚ್ಚರಿಕೆ ನೀಡಿದರು.

ಗ್ರೋಮೋರ್ ರಸಗೊಬ್ಬರ ಮಾರಾಟ ಮಳಿಗೆಗೆ ಭೇಟಿ ನೀಡಿದ ಅಧಿಕಾರಿಗಳು ವಿತರಣೆ ಹಾಗೂ ದಾಸ್ತಾನನ್ನು ಪರಿಶೀಲಿಸಿದರು. ಸ್ಥಳದಲ್ಲಿದ್ದ ರೈತರಿಗೆ ನ್ಯಾನೋ ಯೂರಿಯಾ ಬಳಸುವಂತೆ ಹಾಗೂ ಬೆಳೆಗಳಿಗೆ ಕಾಂಪ್ಲೆಕ್ಸ್ ಯೂರಿಯಾ ರಸಗೊಬ್ಬರ ಬಳಸುವಂತೆ ಮನವಿ ಮಾಡಿದರು.

ಅಗತ್ಯ ರಸಗೊಬ್ಬರ ದಾಸ್ತಾನು ಸಂಬಂಧ ಈಗಾಗಲೇ ತಾಲೂಕು ಆಡಳಿತ ಕ್ರಮ ವಹಿಸಿದೆ. ಪ್ರತಿ ಅಂಗಡಿ ಮಾಲೀಕರು ಮತ್ತು ವಿತರಕರು ಸರ್ಕಾರದ ಮಾರ್ಗಸೂಚಿ ಅನ್ವಯ ವಿತರಿಸಬೇಕು. ಕೃತಕ ಅಭಾವ ಸೃಷ್ಟಿ, ಕಾಳಸಂತೆಯಲ್ಲಿ ಮಾರಾಟ ಹಾಗೂ ಹೆಚ್ಚುವರಿ ದರ ಪಡೆದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ರಸಗೊಬ್ಬರ ಅಂಗಡಿ ಮಾಲೀಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ, ರಾಜಸ್ವ ನಿರೀಕ್ಷಕ ಮೋಹನ್, ಗ್ರಾಮ ಲೆಕ್ಕಾಧಿಕಾರಿಗಳಾದ ಹರೀಶ್, ಷಣ್ಮುಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net