

ಕಾರವಾರ: ಶಿಥಿಲಾವಸ್ಥೆಯಲ್ಲಿರುವ ಹಾಗೂ ಜನಸ್ನೇಹಿಯಾಗಿರದ ತಹಸೀಲ್ದಾರ ಕಚೇರಿ ಹಾಗೂ ಉಪ ನೋಂದಣಾಧಿಕಾರಿ ಕಚೇರಿಯನ್ನು ನೂತನವಾಗಿ ನಿರ್ಮಾಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಿಸುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ, ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ರೂಪಾಲಿ ಎಸ್.ನಾಯ್ಕ ಅವರು ಜಿಲ್ಲಾಧಿಕಾರಿ ಅವರಿಗೆ ಬುಧವಾರ ಮನವಿ ನೀಡಿದ್ದಾರೆ.
ಸಾರ್ವಜನಿಕರು ಆಸ್ತಿ ನೋಂದಣಿ ಹಾಗೂ ದಾಖಲಾತಿಗಾಗಿ ಕಾರವಾರ ತಹಸೀಲ್ದಾರ ಕಾರ್ಯಾಲಯ ಹಾಗೂ ಸಬ್ ರಜಿಸ್ಟ್ರಾರ್ (ಉಪ ನೋಂದಣಾಧಿಕಾರಿ) ಕಚೇರಿಗೆ ತೆರಳುವುದು ಅನಿವಾರ್ಯವಾಗಿದೆ. ಆದರೆ ಈ ಕಟ್ಟಡಗಳು ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಮಳೆಗಾಲದಲ್ಲಿ ಮೇಲ್ಚಾವಣಿಯ ಸೋರಿಕೆಯಿಂದ ಅಧಿಕಾರಿಗಳಿಗೂ ಕಾರ್ಯನಿರ್ವಹಿಸಲು ಅಡಚಣೆಯಾಗುತ್ತಿದೆ. ಅಲ್ಲದೆ ನಿತ್ಯ ನೂರಾರು ಜನರು ಕಾರ್ಯ ನಿಮಿತ್ತ ಕಚೇರಿಗಳಿಗೆ ಆಗಮಿಸುತ್ತಿರುತ್ತಾರೆ. ಪಹಣಿ ಪತ್ರಿಕೆ, ಮ್ಯುಟೇಶನ್ ಎಂಟ್ರಿ, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಶೇಷ ಚೇತನರಿಗೆ ವೇತನ ಮಂಜೂರು ಹೀಗೆ ಹತ್ತಾರು ಅಗತ್ಯ ದಾಖಲಾತಿಗಾಗಿ ಬರುವ ಜನರು ಹಳೆಯದಾದ ಕಿರಿದಾದ ಕಟ್ಟಡದಿಂದ ಪಡಿಪಾಟಲು ಅನುಭವಿಸುತ್ತಿದ್ದಾರೆ.
ಅದರಲ್ಲೂ ಈ ಕಚೇರಿಗಳು ಮೇಲ್ಮಹಡಿಯಲ್ಲಿವೆ. ಹಿರಿಯ ನಾಗರಿಕರು, ವಿಶೇಷ ಚೇತನರು ಮೆಟ್ಟಿಲು ಏರುವುದಕ್ಕೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹಿರಿಯ ನಾಗರಿಕರು, ವಿಶೇಷ ಚೇತನರು ವೇತನ ಮಂಜೂರಿಗಾಗಿ ಬರಲು ಕಷ್ಟಕರವಾಗಿದೆ. ಆದಕಾರಣ ನೂತನವಾಗಿ ನಿರ್ಮಾಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಿಸಬೇಕು. ಆ ಮೂಲಕ ಜನತೆಗೆ ಅನುಕೂಲ ಒದಗಿಸಿಕೊಡಬೇಕು. ಈ ಹಿಂದೆ ನಾನು ಶಾಸಕರಾಗಿದ್ದ ಸಂದರ್ಭದಲ್ಲಿ ಈ ಕಚೇರಿಗಳ ಸ್ಥಳಾಂತರಕ್ಕೆ ವಿಶೇಷ ಪ್ರಯತ್ನ ಮಾಡಿದ್ದು ಜಿಲ್ಲಾಧಿಕಾರಿ ಕಚೇರಿ ಪಕ್ಕದ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವ ಉದ್ದೇಶ ಹೊಂದಲಾಗಿತ್ತು. ಈಗ ಕೂಡಲೇ ಕಚೇರಿಗಳನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿದರು.
ಅಲ್ಲದೇ, ಕಾರವಾರದ ಗಾಂಧಿ ಮಾರುಕಟ್ಟೆಯಲ್ಲಿ ಹೊಸದಾಗಿ ಮಳಿಗೆಗಳನ್ನು ನಿರ್ಮಿಸಬೇಕು ಹಳೆಯ ವ್ಯಾಪಾರಿಗಳಿಗೆ ಅಲ್ಲಿ ಅವಕಾಶಗಳನ್ನು ಕಲ್ಪಿಸಬೇಕು ಎಂದೂ ಜಿಲ್ಲಾಧಿಕಾರಿಗಳಲ್ಲಿ ರೂಪಾಲಿ ಎಸ್.ನಾಯ್ಕ ವಿವರಿಸಿದರು.
ನಾನು ಶಾಸಕಳಾಗಿದ್ದಾಗ ಮಾಲಾದೇವಿ ಮೈದಾನದ ಅಭಿವೃದ್ಧಿಗಾಗಿ 3 ಕೋಟಿ ರೂ. ಮೀಸಲಿಡಲಾಗಿತ್ತು. ಮೈದಾನಕ್ಕೆ ಕಂಪೌಂಡ್ ನಿರ್ಮಾಣಕ್ಕೆ 45 ಲಕ್ಷ ರೂ. ಮಂಜೂರಾಗಿತ್ತು. ಆದರೆ ಕಂಪೌಂಡ್ ಅರೆಬರೆ ನಿರ್ಮಿಸಿ ಹಾಗೆ ಬಿಡಲಾಗಿದೆ. ಮಂಜೂರಾದ ಹಣವನ್ನು ಸದ್ಬಳಕೆ ಮಾಡಿ ಕ್ರೀಡಾಪಟುಗಳಿಗೆ ಪ್ರಯೋಜನವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.
ಹಾಗೆಯೇ, ದೇವಾಲಯಗಳ ಅಭಿವೃದ್ಧಿಗೆ 11 ಕೋಟಿ ರೂ ಮಂಜೂರಾಗಿತ್ತು. 2 ಕೋಟಿ ರೂ. ಮುಜರಾಯಿ ಇಲಾಖೆಯದ್ದಾದರೆ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 9 ಕೋಟಿ ರೂ. ಮಂಜೂರಾಗಿತ್ತು. ಆ ಹಣವನ್ನು ದೇಗುಲಗಳ ಅಭಿವೃದ್ಧಿಗೆ ನೀಡುವಂತಾಗಬೇಕು. ಆ ಮೂಲಕ ಅಭಿವೃದ್ಧಿಕಾರ್ಯಗಳು ಮುಂದುವರಿಯುವಂತಾಗಬೇಕು ಎಂದು ರೂಪಾಲಿ ಎಸ್.ನಾಯ್ಕ ಮನವಿ ಮಾಡಿದರು.