

ಕಾರವಾರ : ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 2024ರ ಟ್ಯಾಗೋರ್ ಪ್ರಶಸ್ತಿಗೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ.
ಪತ್ರಿಕಾ ವಿಭಾಗದಲ್ಲಿ ವಿಜಯ ಕರ್ನಾಟಕ ಪತ್ರಿಕೆ ಪ್ರಧಾನ ವರದಿಗಾರ ಪ್ರಮೋದ ಹರಿಕಾಂತ ಹಾಗೂ ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ವಾಸುದೇವ ಗೌಡ ಮತ್ತು ವಿದ್ಯುನ್ಮಾನ ವಿಭಾಗದಲ್ಲಿ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ನವೀನ್ ಸಾಗರ ಮತ್ತು ವಿಸ್ತಾರ ಟಿವಿ ವಿಡಿಯೋ ಜರ್ನಲಿಸ್ಟ್ ಸಾಯಿಕಿರಣ ಬಾಬ್ರೇಕರ್ ಅವರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಪತ್ರಿಕಾಭವನದಲ್ಲಿ ನಡೆಸಿದ ಜಿಲ್ಲಾ ಕೇಂದ್ರ ಕಾರ್ಯನಿರತ ಪ್ರತ್ರಕರ್ತರ ಸಂಘದ ಅಧ್ಯಕ್ಷರಾದ ಟಿ ಬಿ ಹರಿಕಾಂತ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ಶೇಷಗಿರಿ ಮುಂಡಳ್ಳಿ, ಖಜಾಂಚಿ ಸುಭಾಷ್ ದೂಪದಹೊಂಡ, ಹಿರಿ ಕಿರಿಯ ಸದಸ್ಯರು ಹಾಜರಿದ್ದರು. ಸೆಪ್ಟೆಂಬರ್ 1 ರಂದು ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.