ದಸರಾ ಮೆರವಣಿಗೆಯಲ್ಲಿ ರಾಮನಗರ ಜಿಲ್ಲೆಯ ಸಮಗ್ರ ಚಿತ್ರಣ ನೀಡುವ ಸ್ತಬ್ಧಚಿತ್ರ

06-04-rama-tablo
Published on

ಗಂಗಾಧರ ಬೈರಾಪಟ್ಟಣ ರಾಮನಗರ

ರೇಷ್ಮೆ ನಾಡು ಖ್ಯಾತಿ ಹೊಂದಿರುವ ರಾಮನಗರ ಜಿಲ್ಲೆಯ ಕೀರ್ತಿಯನ್ನು ಸಾರುವ ವಿಶಿಷ್ಟ ಸ್ತಬ್ಧಚಿತ್ರ ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪ್ರದರ್ಶನಗೊಳ್ಳಲಿದೆ.

ಮೈಸೂರಿನಲ್ಲಿ ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಜಿಲ್ಲೆಯ ಕಲೆ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಈ ಸ್ತಬ್ಧಚಿತ್ರ ಅನಾವರಣಗೊಳಿಸಲಿವೆ. ರಾಮನಗರ ಜಿಲ್ಲೆ ಹಲವಾರು ಸಾಂಸ್ಕೃತಿಕ ಕಲೆ ಮತ್ತು ಭೌಗೋಳಿಕ ಹಿನ್ನೆಲೆಯನ್ನು ಹೊಂದಿರುವ ತಾಣವಾಗಿದ್ದು, ಇದರ ಸಮಗ್ರ ಚಿತ್ರಣವನ್ನು ಬಿಂಬಿಸುವಂತೆ ಸ್ತಬ್ಧಚಿತ್ರ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕಾಗಿ ಹಲವಾರು ಕಲಾವಿದರು ಮುಂದೆ ಬಂದಿದ್ದಾರೆ.

ಚಿತ್ರದಲ್ಲಿ ಏನೇನು ಇರಲಿದೆ?

ಜಿಲ್ಲಾ ಪಂಚಾಯಿತಿ ಸಿದ್ಧಪಡಿಸುತ್ತಿರುವ ಸ್ತಬ್ಧಚಿತ್ರದಲ್ಲಿ ಪ್ರಮುಖ ಆಕರ್ಷಣೆ ಚನ್ನಪಟ್ಟಣದ ಬೊಂಬೆ. ಸ್ತಬ್ಧಚಿತ್ರದ ಮುಂಭಾಗದಲ್ಲಿಯೇ ವಿಶ್ವ ಖ್ಯಾತಿ ಪಡೆದುಕೊಂಡಿರುವ ಚನ್ನಪಟ್ಟಣದ ಬೊಂಬೆ ಸ್ಥಾನ ಪಡೆದುಕೊಂಡಿದ್ದರೆ, ನಂತರ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಹಾಗೂ ಶ್ರೀ ಕ್ಷೇತ್ರ ಕಬ್ಬಾಳಮ್ಮ ದೇವಸ್ಥಾನದ ಚಿತ್ರ ಕಂಗೊಳಿಸಲಿದೆ. ಕೊನೆಯಲ್ಲಿ ಅಳಿವಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದಿನ ಬೃಹತ್ ಚಿತ್ರವೂ ಇರಲಿದೆ. ಜತೆಗೆ ಎಡ ಮತ್ತು ಬಲ ಬದಿಯಲ್ಲಿ ಮಾಗಡಿಯ ಕೆಂಪಾಪುರದಲ್ಲಿರುವ ಕೆಂಪೇಗೌಡರ ಸಮಾಧಿ, ರಾಮನಗರದ ಮಾವು, ರೇಷ್ಮೆ, ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ, ರಾಮದೇವರ ಬೆಟ್ಟ ಹಾಗೂ ಮಾಗಡಿಯ ರಂಗನಾಥ ಸ್ವಾಮಿ ದೇವಾಲಯಗಳು ಕಂಗೊಳಿಸಿವೆ.

ಜಿಪಂ ಸಿದ್ದತೆ

ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲೆಯ ಕಲೆ, ಸಾಂಸ್ಕೃತಿಕ ಮತ್ತು ವೈವಿಧ್ಯತೆಯನ್ನು ಪ್ರದರ್ಶನ ಮಾಡುವ ಸ್ತಬ್ಧಚಿತ್ರ ನಿರ್ಮಾಣಕ್ಕೆ ಜಿಲ್ಲಾ ಪಂಚಾಯತಿ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಸ್ತಬ್ಧಚಿತ್ರ ನಿರ್ಮಾಣಕ್ಕೆ ಕಲಾವಿದರಿಂದ ಕೊಟೇಷನ್‌ಗಳನ್ನು ಸಹ ಸ್ವೀಕರಿಸಿವೆ. ಶೀಘ್ರವೇ ಕಲಾವಿದರ ಆಯ್ಕೆ ಅಂತಿಮಗೊಳಿಸಿ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.

ಸ್ಟಾಲ್ ನಿರ್ಮಾಣ

ಇದರ ಜತೆಗೆ ಜಿಲ್ಲೆಯಲ್ಲಿ ಪ್ರದರ್ಶನ ಮೇಳದಲ್ಲಿ ಒಂದು ಸ್ಟಾಲ್ ಸಹ ತೆರಯಲಾಗುತ್ತಿದೆ. ಇದಕ್ಕಾಗಿ ಇಲ್ಲಿ ಈಗಾಗಲೇ 15*52 ಅಳತೆಯ ಸ್ಥಳವೂ ನಿಗದಿಯಾಗಿದೆ. ಇಲ್ಲಿಯೂ ಸಹ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಪ್ರದರ್ಶನ ಮಾಡುವ ಜತೆಗೆ, ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳು, ಜಿಪಂನಿಂದ ಕೈಗೊಂಡಿರುವ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಪ್ರದರ್ಶನ ಮಾಡಲಾಗುತ್ತದೆ.

ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲೆಯ ಕಲೆ, ಸಾಂಸ್ಕೃತಿಕ ಹಾಗೂ ವೈವಿಧ್ಯತೆಯ ಸೊಬಗನ್ನು ಸಾರುವ ಸ್ತಬ್ಧಚಿತ್ರ ಮೈಸೂರು ದಸರಾದಲ್ಲಿ ಪ್ರದರ್ಶನಗೊಳ್ಳಲಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ಮೊದಲ ಬಹುಮಾನ ಪಡೆಯುವ ವಿಶ್ವಾಸವಿದೆ. ಚಿಕ್ಕಸುಬ್ಬಯ್ಯ, ಉಪ ಕಾರ್ಯದರ್ಶಿ, ರಾಮನಗರ ಜಿಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net