

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಬಂಧಿತರು ಕೋಡ್ವರ್ಡ್ಗಳಲ್ಲಿ ಮಾದಕ ದ್ರವ್ಯ ಸಾಗಾಟ ನಡೆಸುತ್ತಿದ್ದು, ಇದಕ್ಕೆ ಶಾಸಕರ ಪುತ್ರ ಸಾಥ್ ನೀಡಿದ್ದ ಎಂಬ ಆರೋಪ ಕೇಳಿಬಂದಿದೆ.
ವಿದೇಶದಿಂದ ಪಾರ್ಸೆಲ್ನಲ್ಲಿ ಟಿ-26 ಕೋಡ್ ವರ್ಡ್ನಲ್ಲಿ ಡ್ರಗ್ಸ್ ಸಾಗಾಟ ನಡೆಯುತ್ತಿತ್ತು. ಹಲಸೂರು ಸಮೀಪದ ಗೆಸ್ಟ್ ಹೌಸ್ ವಿಳಾಸಕ್ಕೆ ಬರುತ್ತಿತ್ತು. ಅಲ್ಲಿ ಪೆಡ್ಲರ್ಗಳು ದುಬಾರಿ ಬೆಲೆಯ ಡ್ರಗ್ಸ್ ಸ್ವೀಕರಿಸಿ ಪ್ರತಿಷ್ಠಿತ ಪಂಚತಾರಾ ಹೋಟೆಲ್ನಲ್ಲಿ ನಡೆಯುತ್ತಿದ್ದ ಪೇಜ್-3 ಪಾರ್ಟಿಗಳಿಗೆ ಪೂರೈಕೆ ಮಾಡುತ್ತಿದ್ದ. ಹೋಟೆಲ್ ದ್ವಾರದಲ್ಲಿ ಮಹಿಳಾ ಉದ್ಯೋಗಿಯನ್ನು ನಿಲ್ಲಿಸುತ್ತಿದ್ದರು. ಆಕೆ ಮಾತ್ರ ಪೇಜ್-3 ಪಾರ್ಟಿಗೆ ಬರುವರ ನೋಂದಣಿ ಮತ್ತು ಒಳಗೆ ಬಿಡುವ ಅಧಿಕಾರಿ ಹೊಂದಿದ್ದಳು. ಈ ಎಲ್ಲ ಅವ್ಯವಹಾರವೂ ಶಾಸಕನ ಪುತ್ರನ ಅಭಯದಲ್ಲಿಯೇ ನಡೆಯುತ್ತಿತ್ತು ಎಂಬ ಆರೋಪ ಕೇಳಿಬಂದಿದ್ದು, ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಸಹ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಶ್ರೇಷ್ಠಮಾರ್ಗದಲ್ಲಿ ನಡೆಯಲೂ ಛಾತಿ ಬೇಕು!
ಡ್ರಗ್ಸ್ ಕೇಸಿನಲ್ಲಿ ಬಂಧಿತ ಕಾರ್ಯಕ್ರಮ ಆಯೋಜಕ ವಿರೇನ್ ಖನ್ನಾ, ಶಿವಪ್ರಕಾಶ್ ಮತ್ತು ವೈಭವ್ ಜೈನ್ ಪ್ರಮುಖ ಪಾತ್ರ ವಹಿಸುತ್ತಿದ್ದರು. ಇವರು ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಿಗೆ ವಿದೇಶಿ ಪ್ರಜೆಗಳು ಹೆಚ್ಚಾಗಿ ಭಾಗವಹಿಸುತ್ತಿದ್ದರು. ಇನ್ನೂ ಸ್ಥಳೀಯ ರಾಜಕೀಯ ಮಕ್ಕಳು, ಉದ್ಯಮಿಗಳ ಪುತ್ರರು ಮತ್ತು ಶ್ರೀಮಂತರು ಪೇಜ್-3 ಪಾರ್ಟಿಗಳಿಗೆ ಗಿರಾಕಿಗಳಾಗಿದ್ದರು. ಹೆಸರು ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.