

ತಿ.ನರಸೀಪುರ: ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಶೇ. 67.59 ಫಲಿತಾಂಶ ದೊರಕಿದ್ದು, ಕಳೆದ ಬಾರಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿದ್ದ ನರಸೀಪುರ ಈ ಬಾರಿ 4ನೇ ಸ್ಥಾನಕ್ಕೆ ಇಳಿದಿದೆ.
ಪರೀಕ್ಷೆಗೆ ಹಾಜರಾಗಿದ್ದ 1744 ಬಾಲಕರ ಪೈಕಿ 1031 ಮಂದಿ ಪಾಸಾಗಿದ್ದು, 1693 ಬಾಲಕಿಯರಲ್ಲಿ 1292 ಮಂದಿ ಉತ್ತೀರ್ಣಗೊಂಡು ಮೇಲುಗೈ ಸಾಧಿಸಿದ್ದಾರೆ. ಸರ್ಕಾರಿ ಶಾಲೆಗಳಿಂದ ಹಾಜರಾಗಿದ್ದ 1733 ವಿದ್ಯಾರ್ಥಿಗಳಲ್ಲಿ 1180 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.68.09 ರಷ್ಟು ಫಲಿತಾಂಶ ದೊರಕಿದ್ದರೆ, ಅನುದಾನಿತ ಶಾಲೆಗಳಿಂದ ಹಾಜರಾಗಿದ್ದ 713 ರಲ್ಲಿ 361 ವಿದ್ಯಾರ್ಥಿಗಳು (ಶೇ.50.63) ಪಾಸಾಗಿದ್ದಾರೆ. ಅನುದಾನ ರಹಿತ ಶಾಲೆಗಳಿಂದ ಹಾಜರಾಗಿದ್ದ 991 ರಲ್ಲಿ 782 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.78.91 ರಷ್ಟು ಫಲಿತಾಂಶ ಸಿಕ್ಕಿದೆ.
ತಾಲೂಕಿನ ಬನ್ನೂರು ವಿವೇಕಾನಂದ ಶಾಲೆಯ ವಿದ್ಯಾರ್ಥಿನಿ ತನ್ಮಯಿ ಸೌಮ್ಯಭೃತಾ 618 ಅಂಕ ಪಡೆದು ತಾಲೂಕಿಗೆ ಟಾಪರ್ ಆಗಿದ್ದಾಳೆ. ದೊಡ್ಡಮುಲಗೂಡು ಸರ್ಕಾರಿ ಪ್ರೌಢಶಾಲೆಯ ಜಿ. ಎನ್.ಪ್ರಜ್ವಲ್ 617, ವಿವೇಕಾನಂದ ಶಾಲೆಯ ಮಾನಸ 615, ತಿ.ನರಸೀಪುರ ಬಿಜಿಎಸ್ ಪ್ರಜ್ವಲ್ ಪಟೇಲ್ 615, ವಿವೇಕಾನಂದ ಬನ್ನೂರಿನ ಪಿ.ಚೈತನ್ಯ 614, ವಿವೇಕಾನಂದ ರಂಗಸಮುದ್ರ ಶಾಲೆಯ ಸಿಂಚನಾ 614, ಲಿಟಲ್ ಫ್ಲವರ್ ಶಾಲೆಯ ಮೇಘನಾ 614, ಬನ್ನೂರಿನ ಬಿಜಿಎಸ್ ಶಾಲೆಯ ಸುನೀಲ್ ಕುಮಾರ್ 613 ಅಂಕ ಪಡೆದಿದ್ದಾರೆ.
ನೂರಕ್ಕೆ 100 ಅಂಕ: ವಿಷಯವಾರು ಕನ್ನಡದಲ್ಲಿ 29, ಇಂಗ್ಲಿಷ್‌ನಲ್ಲಿ 8, ಹಿಂದಿಯಲ್ಲಿ 19, ಗಣಿತದಲ್ಲಿ 9, ಸಾಮಾನ್ಯ ವಿಜ್ಞಾನದಲ್ಲಿ 3 ಹಾಗೂ ಸಮಾಜ ವಿಜ್ಞಾನದಲ್ಲಿ 23 ವಿದ್ಯಾರ್ಥಿಗಳು ಶೇ.100ಕ್ಕೆ 100 ಅಂಕ ಪಡೆದಿದ್ದಾರೆ.
ಕೂಡ್ಲೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಶೇ. 97.73 ಫಲಿತಾಂಶದೊಂದಿಗೆ ತಾಲೂಕಿಗೆ ಮೊದಲ ಸ್ಥಾನದಲ್ಲಿದ್ದರೆ, ರಂಗಸಮುದ್ರ ವಿವೇಕಾನಂದ ಶಾಲೆಯು ಶೇ. 97.14ರೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಟ್ಟಣದ ಎಂ.ಸಿ. ಶಿವಾನಂದ ಶರ್ಮ ಆಂಗ್ಲ ಶಾಲೆ ಶೇ. 96.30, ಸೋಸಲೆ ಆದರ್ಶ ವಿದ್ಯಾಲಯ ಶೇ.96, ಇಂದಿರಾ ಗಾಂಧಿ ವಸತಿ ಶಾಲೆ ಶೇ. 95.65 ಕೊಳತೂರು ಸರ್ಕಾರಿ ಪ್ರೌಢಶಾಲೆ ಶೇ. 93.33, ಕ್ರಮವಾಗಿ 3, 4, 5 ಹಾಗೂ 6ನೇ ಸ್ಥಾನದಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ ತಿಳಿಸಿದ್ದಾರೆ.
ಕಳೆದ ಬಾರಿ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿತ್ತು. ಅದನ್ನು ಉಳಿಸಿಕೊಳ್ಳಲು ಈ ಬಾರಿಯೂ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ವಿವಿಧ ಹಂತದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಗುಣಮಟ್ಟದ ಫಲಿತಾಂಶದೊಂದಿಗೆ ಈ ಬಾರಿ ನಾಲ್ಕನೆಯ ಸ್ಥಾನದಲ್ಲಿದ್ದೇವೆ. ರಾಜ್ಯಕ್ಕಿಂತ ಶೇ.1ರಷ್ಟು ಹೆಚ್ಚಿದ್ದು, ಜಿಲ್ಲಾ ಫಲಿತಾಂಶದಷ್ಟಿದೆ ಎಂದಿದ್ದಾರೆ.