ಸ್ವಾತಂತ್ರೃ ಸೇನಾನಿಗಳ ತವರು ಮಾಯಕೊಂಡ

142
Published on

ಮಾಯಕೊಂಡ: ರಾಜ್ಯದಲ್ಲೇ ಅತಿ ಹೆಚ್ಚು ಸ್ವಾತಂತ್ರೃ ಯೋಧರನ್ನು ಹೊಂದಿದ್ದ ಮಾಯಕೊಂಡ ಹೋಬಳಿ ಸ್ವಾತಂತ್ರೃ ಸಂಗ್ರಾಮದಲ್ಲಿ ತನ್ನದೆ ಆದ ಹೆಗ್ಗುರುತು ಮೂಡಿಸಿದೆ.

ಇದೊಂದೇ ಊರಲ್ಲಿ 250ಕ್ಕಿಂತ ಅಧಿಕ ದೇಶಪ್ರೇಮಿಗಳು ತಮ್ಮ ಜೀವ ಪಣಕ್ಕೆ ಇಟ್ಟು ಬ್ರಿಟೀಷರ ವಿರುದ್ಧ ತೊಡೆ ತಟ್ಟಿದ್ದರು ಎಂಬುದೀಗ ಇತಿಹಾಸ.

1938ರಿಂದ 43ರ ಅವಧಿಯಲ್ಲಿ ಸ್ವಾತಂತ್ರೃದ ಕಿಚ್ಚು ಹೆಚ್ಚಾಗಿದ್ದ ವೇಳೆ ಮಾಯ ಕೊಂಡ ಗ್ರಾಮದ ಆಗಿನ ಪ್ರಮುಖರಾದ ಬೊಮ್ಮಪ್ಪ ಗೋಗಿ, ಸಪ್ಪಳ ಬೀರಪ್ಪ, ನಾಗ ಲಿಂಗಾಚಾರ್, ಲಾವಣಿ ಗೋವಿಂದಪ್ಪ, ವಿಶ್ವನಾಥಾಚಾರ್, ತೋಳ ಹನುಮಪ್ಪ, ಶೇಷಗಿರಿ ಪುಟ್ಟಪ್ಪ, ಸರಾಯದ ಗೋಪಾಲಪ್ಪ, ಬೃಂಗಿ ಲಕ್ಷ್ಮಣ್ ನಾಯ್ಕ ಇತರರು ಬ್ರಿಟಿಷರ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದ್ದರು.

ಮಹಾತ್ಮ ಗಾಂಧೀಜಿ ದಾವಣಗೆರೆಗೆ ಭೇಟಿ ನೀಡಿದ್ದಾಗ ಮಾಯಕೊಂಡದಿಂದ ನೂರಾರು ಸ್ವಾತಂತ್ರೃ ಯೋಧರು ಪಾದಯಾತ್ರೆ ಮೂಲಕ ದಾವಣಗೆರೆ ಸಮಾವೇಶದಲ್ಲಿ ಪಾಲ್ಗೊಂಡು ಬ್ರಿಟಿಷರ ವಿರುದ್ಧ ಹೋರಾಟದ ರೂಪುರೇಷೆ ಹೆಣೆದಿದ್ದರು.

ಮಾಯಕೊಂಡ ಭಾಗದಲ್ಲಿ ಹಾದುಹೋಗಿರುವ ರೈಲು ಹಳಿ ಕಿತ್ತು ಹಾಕುವುದರೊಂದಿಗೆ ಬ್ರಿಟಿಷರಿಗೆ ಪಾಠ ಕಲಿಸಿದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ 2004 ಅವಧಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ನಾಗಲಿಂಗಾಚಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇವರಿಗೆ ಮಾಯಕೊಂಡ ಪುರಸಭಾ ಅಧ್ಯಕ್ಷ ಸ್ಥಾನದ ಗೌರವವೂ ಪ್ರಾಪ್ತವಾಗಿತ್ತು.

2000ಕ್ಕೂ ಅಧಿಕ ಮನೆ ಹೊಂದಿರುವ ಈ ಹೋಬಳಿ ಕೇಂದ್ರ ಸ್ವಾತಂತ್ರೃ ಹೋರಾಟದಲ್ಲಿ ಸದ್ದು ಮಾಡಿದ್ದಷ್ಟೇ ಅಲ್ಲ. ಅಂತಾರಾಜ್ಯ ಮಟ್ಟದ ಕುಸ್ತಿಪಟುಗಳನ್ನು ಹೊಂದಿದೆ. ಚಿತ್ರದುರ್ಗದ ಪಾಳೆಗಾರ ರಾಜವೀರ ಹಿರೇಮದಕರಿ ನಾಯಕರ ಸಮಾಧಿ ಸ್ಥಳವೂ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net