ಕಾಡು ಪ್ರಾಣಿ ಹಾವಳಿ ತಡೆಯಲು ಶಾಶ್ವತ ಕ್ರಮ ವಹಿಸಿ-ಸ್ವರ್ಣವಲ್ಲೀ ಕೃಷಿ ಜಯಂತಿಯಲ್ಲಿ ನಿರ್ಣಯ

Krishi jayanti
Published on

ಶಿರಸಿ:  ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ‌ ಹಮ್ಮಿಕೊಂಡ ಎರಡು ದಿನಗಳ ಕೃಷಿ ಜಯಂತಿಯಲ್ಲಿ ಆರು ಪ್ರಮುಖ‌ ನಿರ್ಣಯ ಅಂಗೀಕರಿಸಲಾಯಿತು.

 ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾ ಸ್ವಾಮೀಜಿ, ಕಿರಿಯ ಮಠಾಧೀಶರಾದ ಶ್ರೀಆನಂದಬೋಧೇಂದ್ರ ಸರಸ್ವತೀ‌ ಸ್ವಾಮೀಜಿಗಳ‌ ಸಾನ್ನಿಧ್ಯದಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ರೈತರು ಬೆಳೆಯುವ ಬೆಳೆಗಳಿಗೆ ಸಮಾಧಾನಕರವಾದ ದರವಿದ್ದು, ವಿವಿಧ ರೀತಿಯ ಉಪಬೆಳೆಗಳನ್ನು ಬೆಳೆಯಲು ವಿಫುಲ ಅವಕಾಶವಿದ್ದರೂ, ಅತಿಯಾದ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿರುವುದರಿಂದ, ಈ ಕಾಡುಪ್ರಾಣಿಗಳ ಹಾವಳಿಯಿಂದ ಶಾಶ್ವತ ಪರಿಹಾರ ದೊರಕಿಸಿಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ, ಸರ್ಕಾರಕ್ಕೆ ಒತ್ತಾಯಿಸಲಾಯಿತು.

ರೈತರು ಬೆಟ್ಟ ಭೂಮಿಯನ್ನು ಕೃಷಿ ಬಳಕೆಗಾಗಿ. ಸೊಪ್ಪು, ದರಕು, ಗೊಬ್ಬರ, ಕಟ್ಟಿಗೆ ಮುಂತಾದ ಅವಶ್ಯಕತೆಗಳಿಗಾಗಿ ಹಾಗೂ ಹಣ್ಣು-ಹಂಪಲು ಗಿಡಗಳನ್ನು ಬೆಳೆಯುವುದರ ಜೊತೆಗೆ ಅರಣ್ಯಗಿಡಗಳನ್ನು ಬೆಳೆಸಿ ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಹಣಿಯಲ್ಲಿ 'ಬ' ಖರಾಬ ನಮೂದಿಸಿ ಅರಣೀಕರಣಕ್ಕೆ ಮುಂದಾಗುತ್ತಿರುವುದನ್ನು ಗಮನಿಸಿದ ಈ ಸಮಾವೇಶ ಒಕ್ಕೊರಲಿನಿಂದ ವಿರೋಧಿಸಿ, ಪಹಣಿಯಲ್ಲಿ 'ಬ' ಖರಾಬ ದಾಖಲಾತಿಯನ್ನು ಕೈ ಬಿಡುವಂತೆ ಸರಕಾರಕ್ಕೆ ಆಗ್ರಹಿಸಿತು.

ಕೃಷಿ ಕ್ಷೇತ್ರದಲ್ಲಿ ಉತ್ತಮ ಆದಾಯವಿದ್ದು, ನೆಮ್ಮದಿಯ ಜೀವನ ಸಾಗಿಸಲು ಸಾಕಷ್ಟು ಅವಕಾಶವಿದ್ದರೂ, ಯುವ ಸಮುದಾಯ ಶಹರ ಜೀವನ ನಡೆಸಲು ಪೇಟೆ ಪಟ್ಟಣಗಳ ಬಣ್ಣದ ಬದುಕಿಗೆ ಮಾರುಹೋಗುತ್ತಿರುವ ಇಂದಿನ ಯುಗದಲ್ಲಿ ಯುವ ಪೀಳಿಗೆ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ  ಕರೆ ನೀಡಿದ‌ ಕೃಷಿ ಜಯಂತಿ, ಕೃಷಿಯಲ್ಲಿ ತೊಡಗುವ ಯುವಕ- ಯುವತಿಯರಿಗೆ ಸರಕಾರದಿಂದ ವಿಶೇಷ ಮಾನ್ಯತೆ ಸವಲತ್ತುಗಳು ಸಿಗುವಂತೆ ಒತ್ತಾಯಿಸಿತು.

ಹೈನುಗಾರಿಕೆ ಗೋ ಸೇವೆಗಳ ಮಹತ್ವವನ್ನು ಅರಿತಿದ್ದರೂ, ದನ ಕರುಗಳನ್ನು ಸಾಕುವುದರ ಬದಲು, ಗೋ ಉತ್ಪನ್ನಗಳನ್ನು ಕೊಂಡುಕೊಳ್ಳುವ ಪರಿಪಾಠಕ್ಕೆ ಮುಂದಾಗಿರುವ ಸಮುದಾಯಕ್ಕೆ ಕೃಷಿ ಕ್ಷೇತ್ರಕ್ಕೆ ಪೂರಕವಾಗಿರುವ ದನಗಳನ್ನು ಸಾಕಿ, ಕೃಷಿ ಕಾರ್ಯದಲ್ಲಿ ಮುನ್ನಡೆಯುವಂತೆ ಹಾಗೂ ರೈತರಿಗೆ ರಸಮೇವು ಮತ್ತು ಕರುಗಳ ಆಹಾರ ರಿಯಾಯಿತಿ ದರದಲ್ಲಿ ಸಿಗುವಂತೆ ಆಗಬೇಕು ಎಂದು ಆಗ್ರಹಿಸಲಾಯಿತು.

ಮಲೆನಾಡಿನ ಬೇಸಿಗೆಯ ನೀರಿನ ಬರವನ್ನು ನೀಗಿಸಲು ಹಳ್ಳ, ತೊರೆಗಳಿಗೆ ಅರೆಶಾಶ್ವತ ಕಟ್ಟುಗಳನ್ನು ಹಾಕಲು ಸರಕಾರ ವಿಶೇಷ ಯೋಜನೆಗಳನ್ನು ಒದಗಿಸಬೇಕು. ಗ್ರಾಮೀಣ ಪ್ರದೇಶದ ಸರ್ಕಾರಿ ಕೆರೆಗಳನ್ನು ವ್ಯವಸ್ಥಿತವಾಗಿ ಹೂಳ ತೆಗೆದು ನೀರಾವರಿಗೆ ಅನುಕೂಲವಾಗುವಂತೆ ಮಾಡಲು ಒತ್ತಾಯಿಸಲಾಯಿತು.

 ಕೃಷಿ ಕಾರ್ಮಿಕರ ಅವಲಂಬನೆ ತಗ್ಗಿಸಲು ಯಂತ್ರೋಪಕರಣ ಬಳಕೆ ಬಗ್ಗೆ ಸಂಶೋಧ ಹಾಗೂ ಏರುತ್ತಿರುವ ಕೃಷಿ ಕಾರ್ಮಿಕರ ವೇತನ ನಿಭಾಯಿಸಲು ಸರಕಾರದ ನರೇಗ ಯೋಜನೆಯು ಸಹಾಯಕ್ಕೆ ಬರಬೇಕು. ಜೊತೆಯಲ್ಲಿ ರೋಗನಿರೋಧಕ ಕ್ರಮಗಳ- ಸಾಮೂಹಿಕವಾಗಿ ಕೈಗೊಳ್ಳುವಂತಾಗಬೇಕೆಂದು ಎಂದೂ ಆಗ್ರಹಿಸಲಾಯಿತು.

ಸಮಾರೋಪ

ಶಿಕ್ಷಣದ ಮೂಲ ಉದ್ದೇಶ‌ ಪರದೇಶಕ್ಕೆ ತೆರಳುವುದಲ್ಲ. ಪ್ರತಿಭೆ ಪಲಾಯನ ಒಳ್ಳೆಯ ಬೆಳವಣಿಗೆಯಲ್ಲ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

 ಸ್ವರ್ಣವಲ್ಲೀಯಲ್ಲಿ ಆಯೋಜಿಸಲಾಗಿದ್ದ ಕೃಷಿ ಜಯಂತಿ ಸಮಾರೋಪದಲ್ಲಿ ಬುಧವಾರ ಅವರು ಮಾತನಾಡಿದರು.ಕೃಷಿ ಇಟ್ಟುಕೊಂಡೇ‌ ಮುಂದುವರಿಸಬೇಕು. ನಮ್ಮ ಸಂಸ್ಕೃತಿ ಇಟ್ಟುಕೊಂಡೇ‌ ಮುಂದೆ ಹೋಗಬೇಕು. ನಗರಕ್ಕೆ ವಲಸೆ ಹೋದರೆ ಸಂಸ್ಕೃತಿ, ಧಾರ್ಮಿಕ ಆಚರಣೆ ಇಲ್ಲವಾಗುತ್ತಿದೆ. ಸಾಮೂಹಿಕ ಆಚರಣೆ ಕೈ ಬಿಡಬಾರದು ಎಂದರು.

ಯುವಕರ ಪ್ರವಾಹ ನಗರ ಮುಖಿಯಾಗಿ ಹೋಗುತ್ತಿದೆ. ಇದನ್ನು ತಡೆಯದೇ ಹೋದರೆ ಕೃಷಿ ಜೊತೆಗೆ ಸಹಕಾರಿ ಆಂದೋಲನ‌ ಕೂಡ ದುರ್ಬಲ ಆಗುತ್ತದೆ‌. ವಿಧ್ಯಾಭ್ಯಾಸ ಮಾಡಿದವರು‌ ಕೃಷಿಗೆ ಬಂದರೆ ಇನ್ನಷ್ಟು ಬೆಳವಣಿಗೆ ಸಾಧ್ಯವಾಗುತ್ತದೆ. ಮೂಲಾಧಾರವಾದ ಕೃಷಿ ಬಿಟ್ಟು ಸಾಧನೆ‌‌ ಮಾಡಬಾರದು. ಯಾವುದೇ ಶಿಕ್ಷಣ ಪಡೆದವರೂ ಕೃಷಿಗೆ ವಾಪಸ್ ಬರಬಹುದು. ಇದನ್ನು ಯುವಕರು ಹೆಚ್ಚು ಅರ್ಥ ಮಾಡಿಕೊಳ್ಳಬೇಕು ಎಂದರು.

 ನಮಗೆಲ್ಲ  ಆಧಾರ ಆಗಿರುವದು ಕೃಷಿ.  ಉಪ‌ ಕಸುಬು. ವ್ಯಾಪಾರ, ಕೈಗಾರಿಕೆ, ವೃತ್ತಿ ಆಗಬೇಕು. ಮೂಲ ಧ್ಯೇಯ ಬಿಡಬಾರದು ಎಂದರು.

ಕಿರಿಯ ಯತಿಗಳಾದ ಶ್ರೀ ಆನಂದ‌ಬೋಧೇಂದ್ರ ಸರಸ್ವತೀ‌ಮಹಾ ಸ್ವಾಮೀಜಿಗಳು ಆರ್ಶೀವಚನ‌‌ ನೀಡಿ,ನಮಗೆ ದೇವರಲ್ಲಿ ನಿಜವಾದ ಭಕ್ತಿ ಇದ್ದರೆ  ದೇವರು‌ ಒಲಿಯುತ್ತಾನೆ‌ ಎಂಬುದಕ್ಕೆ ನೃಸಿಂಹನೇ ಸಾಕ್ಷಿ. ನಮ್ಮಲ್ಲೂ ಕಾಮ ಕ್ರೋಧ ಮದ‌ ಮತ್ಸರಗಳೆಂಬ ಹಿರಣ್ಯ ಕಶ್ಯಪು ಇದ್ದಾನೆ. ಪ್ರಹ್ಲಾದನ ಭಕ್ತಿ‌ ಎಲ್ಲರಲ್ಲೂ ಇರಲಿ. ಜ್ಷಾನ ಎಂಬ ನರಸಿಂಹನ‌ ಮೂಲಕ ಹಿರಣ್ಯಕಶ್ಯಪು ಎಂಬ ಅಜ್ಣಾನದ ನಾಶವಾಗಲಿ ಎಂದೂ ಆಶೀರ್ವದಿಸಿದರು.

ಟಿಎಸ್ಎಸ್  ಗೋಪಾಲಕೃಷ್ಣ ವೈದ್ಯ, ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಕಾರ್ಯದರ್ಶಿ ಜಿ.ವಿ.ಹೆಗಡೆ ಗೊಡವೆಮನೆ, ಪ್ರತಿಷ್ಠಾನದ ಅಧ್ಯಕ್ಷ ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ ಹಕ್ಕಿಮನೆ ಇತರರು‌ ಇದ್ದರು.

ಪ್ರಶಸ್ತಿ ಪ್ರದಾನ

ಸೋಂದಾ ಸ್ವರ್ಣವಲ್ಲೀ ಮಹಾ‌ಸಂಸ್ಥಾನದ ಕೃಷಿ ಪ್ರತಿಷ್ಠಾ‌ನ ನೀಡುವ ರಾಜ್ಯ ಮಟ್ಟದ ಕೃಷಿ ಸಂಬಂಧಿತ ಪ್ರಶಸ್ತಿಯನ್ನು‌ ಕೃಷಿ ಜಯಂತಿ ಸಮಾರೋಪದಲ್ಲಿ‌ ಸ್ವರ್ಣವಲ್ಲೀ ಮಹಾ‌ ಸಂಸ್ಥಾನದ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ‌ ಸ್ವಾಮೀಜಿಗಳು, ಕಿರಿಯ ಶ್ರೀಗಳಾದ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳು ಪ್ರದಾನ‌ ಮಾಡಿದರು.

ಉತ್ತಮ ಕೃಷಿಕ (ಕೃಷಿ ಕಂಠೀರವ) ಪ್ರಶಸ್ತಿಯನ್ನು ಯಲ್ಲಾಪುರ ಬಾರೆ‌ ಸಮೀಪದ ವಿಘ್ನೇಶ್ವರ ನಾರಾಯಣ ಭಟ್ಟ ಹೊಸ್ತೋಟ, ಸಾಧಕ ಕೃಷಿ ಮಹಿಳೆ ಪ್ರಶಸ್ತಿಗೆ ಯಲ್ಲಾಪುರ ಸಬಗೇರಿ ಹುತ್ಕಂಡದ ವನಿತಾ ರಾಮಚಂದ್ರ ಭಟ್, ಉತ್ತಮ ಕೃಷಿ ಅವಿಭಕ್ತ ಕುಟುಂಬ ಪ್ರಶಸ್ತಿಯನ್ನು ಹೆಗಡೆಕಟ್ಟ ಹಲಸಿನಕಟ್ಟೆಯ ಎಂ. ವಿ ಹೆಗಡೆ ಕುಟುಂಬ, ಸಾಧಕ ಕೃಷಿ ಕುಶಲಕರ್ಮಿ ಪ್ರಶಸ್ತಿಯನ್ನು ಸೋಂದಾ‌ ಕೆಶಿನ್ಮನೆಯ ಸುರೇಶ ಮರಾಠಿ ಅವರಿಗೆ ಪ್ರದಾ‌ನ ಮಾಡಲಾಯಿತು.

ಮನುಷ್ಯನ‌ ಧರ್ಮ ಸಾಧನೆಗೆ‌ ಈ ಶರೀರ ಅತ್ಯಂತ ಅವಶ್ಯಕವಾಗಿದೆ. ಆಹಾರ ಧಾನ್ಯದಿಂದ‌ ಬರುತ್ತದೆ. ಧಾನ್ಯ ಕೃಷಿಯಿಂದ ಬರುತ್ತದೆ. ಕೃಷಿ ಉಳಿದರೆ ಧಾರ್ಮಿಕ‌ತೆ ಕೂಡ ಉಳಿಯುತ್ತದೆ. ನಾವೂ ಕೃಷಿಯನ್ನು ಮುಂದುವರಿಸುತ್ತೇವೆ.

ಶ್ರೀಅನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ

ಮುಂದಿನ ವರ್ಷ ಪ್ರತಿ‌ಮನೆಯಿಂದ ಇಬ್ಬರಾದರೂ  ಕೃಷಿ ಜಯಂತಿಗೆ ಬರಬೇಕು. ಇಲ್ಲಿ ಒಂದಿಷ್ಟು ಪ್ರೇರಣೆ ಕೃಷಿಯ ಪ್ರೇರಣೆ ಮಾಡಬೇಕು. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ‌ಮಹಾ ಸ್ವಾಮೀಜಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net