More

  ದೇಶದ ಸಮೃದ್ಧಿಗೆ ಉಳಿಯಲಿ ಹಳೇ ತಳಿ

  ಶಿರಸಿ: ದೇಶದ ಸಮೃದ್ಧಿಗೆ ಕೃಷಿ ಸಂಸ್ಕೃತಿಯೊಂದಿಗೆ ಬಂದ ಹಳೆಯ ತಳಿಯ ಬೆಳೆಗಳೂ ಉಳಿಯಬೇಕಿದೆ ಎಂದು ಶಿವಮೊಗ್ಗ ಜಿಲ್ಲೆ ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಹೇಳಿದರು.

  ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಮಂಗಳವಾರದಿಂದ ಆರಂಭಗೊಂಡ ಎರಡು ದಿನಗಳ ಕೃಷಿ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಸಂಸ್ಕೃತಿ, ಪರಂಪರೆ ಕೃಷಿಯೊಂದಿಗೆ ಸಮ್ಮಿಳಿತಗೊಂಡಿದೆ. ರೈತ ಪ್ರಾಮಾಣಿಕತೆಯಿಂದ , ನಂಬಿಕೆಯಿಂದ ಕೃಷಿ ಮಾಡಿದಾಗ ಒಳ್ಳೆಯ ಫಲ ಕಾಣಲು ಸಾಧ್ಯ. ಆದರೆ, ಆಧುನಿಕತೆ ಹೆಸರಿನಲ್ಲಿ ಎಲ್ಲವನ್ನೂ ಮರೆಯುತ್ತಿದ್ದೇವೆ. ಅದೇ ಮಾದರಿಯಲ್ಲಿ ಹಳೆಯ ತಳಿಯ ಭತ್ತದ ಗಿಡಗಳೂ ಕಣ್ಮರೆ ಆಗುತ್ತಿವೆ. ಆಧುನಿಕತೆಯ ಹೈಬ್ರಿಡ್ ತಳಿಗಳ ನಡುವೆ ಸಂಸ್ಕೃತಿಯೊಂದಿಗೆ ಸಮ್ಮಿಳಿತಗೊಂಡ ತಳಿಗಳು ಸಹ ನಾಪತ್ತೆ ಆಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

  ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ, ಕೃಷಿ ಸಮಸ್ಯೆಗಳನ್ನು ಪರಾಂಬರಿಸಿ ನೋಡಬೇಕು. ಕೃಷಿಯಲ್ಲಿ ಸಮಸ್ಯೆಗಳಿಗಿಂತ ಜಾಸ್ತಿ ಸಕಾರಾತ್ಮಕ ಸಂಗತಿಗಳಿವೆ. ನಗರ, ನೌಕರಿ ಆಕರ್ಷಣೆ ಸಲುವಾಗಿ ಯುವ ಜನ ಕೃಷಿ ಬಿಡುವುದು ಸರಿಯಲ್ಲ. ಇತ್ತೀಚೆಗೆ ಕೃಷಿಕರು ಅಡಕೆ ಸಂಸ್ಕರಣೆಯನ್ನು ಮನೆಯಲ್ಲಿ ಮಾಡುತ್ತಿಲ್ಲ. ರೈತರು ಹಸಿ ಅಡಕೆಯನ್ನು ನೇರವಾಗಿ ಮಾರುಕಟ್ಟೆಗೆ ತರುತ್ತಿದ್ದಾರೆ. ಇದು ಕೃಷಿಯ ಬಗ್ಗೆ ಉದಾಸೀನತೆ ತೋರುತ್ತದೆ. ಹಳ್ಳಿಗಳು ವೃದ್ಧಾಶ್ರಮ ಆಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಮೂಲ ಕೃಷಿ ಬಿಟ್ಟು ಹೊರಗಡೆ ಉದ್ಯೋಗದಲ್ಲಿ ಇದ್ದವರಿಗೂ ನೆಮ್ಮದಿಯ ಬದುಕು ಇರುವುದಿಲ್ಲ. ಕೃಷಿ ನೆಮ್ಮದಿಯ ಜೀವನವನ್ನು ನೀಡುತ್ತದೆ ಎಂದರು.

  ಯುವಕರು, ಹಿರಿಯರಿಗೂ ಕೃಷಿ ಬಗ್ಗೆ ಆಸಕ್ತಿ ಕಡಿಮೆ ಆಗಿದೆ. ಕೃಷಿಕನಿಗೆ ಹೆಣ್ಣು ಕೊಡದ ಸ್ಥಿತಿ ಉಂಟಾಗಿದೆ. ಕೃಷಿ ಕ್ಷೇತ್ರದ ಸಮಸ್ಯೆ ಪರಿಹಾರ, ಅನಾಸಕ್ತಿ ದೂರಗೊಳಿಸಲು ಕೃಷಿ ಜಯಂತಿ ಆರಂಭಿಸಿದ್ದೇವೆ ಎಂದರು.

  ನಿವೃತ್ತ ಕೃಷಿ ವಿಜ್ಞಾನಿ ಆರ್.ಆರ್. ಹಂಚಿನಾಳ ಮಾತನಾಡಿ, ಭಾರತದಷ್ಟು ಜೀವ ವೈವಿಧ್ಯ ಪ್ರಪಂಚದ ಬೇರಾವ ರಾಷ್ಟ್ರದಲ್ಲೂ ಇಲ್ಲ. ಋಷಿ ಮುನಿಗಳ ಆಶೀರ್ವಾದ, ಪೂರ್ವಜರ ಪ್ರಯತ್ನದಿಂದ ಜೀವ ವೈವಿಧ್ಯತೆ ಕಾಪಾಡಿಕೊಂಡು ಬರಲು ಸಾಧ್ಯವಾಗಿದೆ. ದೇಶದಲ್ಲಿ ರೈತರ ಬೆಳೆಯುವ ಬೆಳೆಯಲ್ಲಿ 2 ಲಕ್ಷ ತಳಿಗಳಿವೆ. ಜಗತ್ತಿನಲ್ಲಿ ಎಲ್ಲಿಯೂ ಇಷ್ಟು ವಿಧದ ಬೆಳೆ ತಳಿಗಳಿಲ್ಲ ಎಂದರು.

  ಸ್ವರ್ಣವಲ್ಲಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ, ಪರಿಸರ ಹೋರಾಟಗಾರ ಅನಂತ ಅಶೀಸರ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಲಕ್ಷ್ಮೀನಾರಾಯಣ ಹೆಗಡೆ, ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಆರ್. ವಾಸುದೇವ, ಮಠದ ಪ್ರಮುಖ ವಿ.ಎನ್. ಹೆಗಡೆ ಬೊಮ್ನಳ್ಳಿ, ಸುರೇಶ ಹಕ್ಕಿಮನೆ ಇತರರಿದ್ದರು.

  ಪ್ರಶಸ್ತಿ ಪ್ರದಾನ

  ಕೃಷಿ ಜಯಂತಿ ಅಂಗವಾಗಿ ನೀಡಲಾಗುವ ವಿವಿಧ ಕೃಷಿ ಪ್ರಶಸ್ತಿಗಳನ್ನು ಸ್ವರ್ಣವಲ್ಲೀ ಶ್ರೀಗಳು ಪ್ರದಾನ ಮಾಡಿದರು.

  ಅತ್ಯುತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಯನ್ನು ಪ್ರಕಾಶ ಕೃಷ್ಣ ಭಟ್ ಅಡೆಮನೆ ಅವರಿಗೆ, ದ್ವಿತೀಯ ಪ್ರಶಾಂತ ಹೆಗಡೆ ಸಂಕದಮನೆ ಹಾಗೂ ಸುಬ್ರಾಯ ಗಾಂವಕರ್ ಜೊಯಿಡಾ ಅವರಿಗೆ ಪ್ರದಾನ ಮಾಡಲಾಯಿತು.

  ……..

  ವಿಶೇಷಾಂಕ ಬಿಡುಗಡೆ

  ಸ್ವರ್ಣವಲ್ಲೀ ಸಂಸ್ಥಾನ ಪ್ರಕಟಿಸುತ್ತಿರುವ ಸ್ವರ್ಣವಲ್ಲೀ ಪ್ರಭಾ ಪತ್ರಿಕೆ ಈ ಬಾರಿ ಕೃಷಿ ವಿಶೇಷಾಂಕ ಹೊರ ತಂದಿದ್ದು, ಶ್ರೀಆನಂದ ಬೋಧೇಂದ್ರ ಸರಸ್ವತೀ ಸ್ವಾಮೀಜಿ ಬಿಡುಗಡೆಗೊಳಿಸಿದರು. ಸ್ವರ್ಣವಲ್ಲೀ ದೇವರಕಾಡು ನಾಮಫಲಕವನ್ನು ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅನಾವರಣಗೊಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts