ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದ ಸಂತ ತ್ರಯರು

Tiranga_Yatre11
Published on

ತುಮಕೂರು: ಸ್ವಾತಂತ್ರೃ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ತಿರಂಗ ಯಾತ್ರಾ ಸಮಿತಿ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಬೃಹತ್ ತಿರಂಗ ಯಾತ್ರೆಯಲ್ಲಿ ತ್ರಿವರ್ಣ ಧ್ವಜ ಹಿಡಿದ ಕೇಸರಿ ಕಲಿಗಳ ‘ಭಾರತ್ ಮಾತಾಕೀ ಜೈ, ವಂದೇ ಮಾತರಂ’ ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು.

ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ (ಎಸ್‌ಐಟಿ) ಕಾಲೇಜು ಮುಂಭಾಗದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಮಂಗಳವಾರ ಸಂಜೆ ತಿರಂಗ ಯಾತ್ರೆಗೆ ಚಾಲನೆ ನೀಡಿದರು. ಎಸ್‌ಐಟಿಯಿಂದ ಗಂಗೋತ್ರಿ ರಸ್ತೆ, ಎಸ್‌ಐಟಿ ಮುಖ್ಯರಸ್ತೆ ಮೂಲಕ ಸಾಗಿದ ತಿರಂಗ್ರ ಯಾತ್ರೆ ಉದ್ದಕ್ಕು ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ-ವಿವೇಕಾನಂದ ಆಶ್ರಮದ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ, ಬೆಳ್ಳಾವಿಯ ಶ್ರೀ ಕಾರದ ವೀರಬಸವ ಸ್ವಾಮೀಜಿ ತ್ರಿವರ್ಣ ಧ್ವಜವನ್ನು ಬೀಸುತ್ತಾ ಹೆಜ್ಜೆ ಹಾಕಿದ್ದು ಯುವಜನತೆಯಲ್ಲಿ ರಾಷ್ಟ್ರಪ್ರೇಮವನ್ನು ಉತ್ತೇಜಿಸಿತು.

ಸಂಸದ ಜಿ.ಎಸ್.ಬಸವರಾಜು, ರಾಜ್ಯಸಭಾ ಸದಸ್ಯ ಜಗ್ಗೇಶ್, ಮಾಜಿ ಸಚಿವ ಬಿ.ಸಿ.ನಾಗೇಶ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಹಿರಿಯ ಸ್ವಾತಂತ್ರೃ ಹೋರಾಟಗಾರ ಸಂಪತ್, ಟಿ.ಆರ್.ರೇವಣ್ಣ, ಬಿಜೆಪಿ ಉಪಾಧ್ಯಕ್ಷ ಎಂ.ಬಿ.ನಂದೀಶ್, ಎಸ್.ಶಿವಪ್ರಸಾದ್, ಸ್ಫೂರ್ತಿ ಚಿದಾನಂದ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡರು.

ಕಲಾತಂಡಗಳ ಮೆರಗು!: ತಿರಂಗ ಯಾತ್ರೆಯಲ್ಲಿ ಕೇರಳದ ಚಂಡೆ, ಮೈಸೂರುನಗಾರಿ, ಕೋಲಾಟ, ತಮಟೆ, ಹರೆ, ಡೊಳ್ಳುಕುಣಿತ, ಮಂಗಳೂರು ನಾಸಿಕ್ ಬ್ಯಾಂಡ್, ಪೂಜಾಪಟ ಸೇರಿದಂತೆ 13ಕ್ಕು ಹೆಚ್ಚು ಕಲಾ ತಂಡಗಳು ಯಾತ್ರೆಯಲ್ಲಿ ಭಾಗವಹಿಸಿ ಮೆರುಗು ನೀಡಿದವು. ಅಲ್ಲದೆ, ಸ್ವಾತಂತ್ರೃ ಹೋರಾಟಗಾರರ ವಿವಿಧ ವೇಷಭೂಷಣಗಳೊಂದಿಗೆ ಮಕ್ಕಳು ಯಾತ್ರೆಯಲ್ಲಿ ಪಾಲ್ಗೊಂಡವು. ಎನ್‌ಸಿಸಿ, ಎನ್‌ಎಸ್‌ಎಸ್, ಮಾಜಿ ಸೈನಿಕರು, ಮಹಿಳಾ ಸಂಘಟನೆಗಳು ಸೇರಿದಂತೆ ಹಲವರು ಪಾಲ್ಗೊಂಡರು.

ಸಂಜೆ 5ಕ್ಕೆ ಆರಂಭವಾದ ತಿರಂಗಯಾತ್ರೆ ಸಂಜೆ 8ರ ಹೊತ್ತಿಗೆ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ತಿರಂಗ ಯಾತ್ರೆ ಸಂಪನ್ನಗೊಂಡಿತು. ಜೂನಿಯರ್ ಕಾಲೇಜು ಮೈದಾನದಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನವಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net