ದೀರ್ಘದಂಡ ನಮಸ್ಕಾರ ಮೂಲಕ ಅಂಜನಾದ್ರಿ ಬೆಟ್ಟ ಏರಿದ ಸ್ವಾಮೀಜಿ..

1292666
Published on

ಕೊಪ್ಪಳ: ಆಂಜನೇಯನ ಹುಟ್ಟಿನ ವಿಚಾರವಾಗಿ ಸದ್ಯ ಬಹಳಷ್ಟು ಸುದ್ದಿಯಲ್ಲಿರುವ ಅಂಜನಾದ್ರಿ ಬೆಟ್ಟದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿರುತ್ತದೆ. ಈ ಬೆಟ್ಟವನ್ನು ಹಾಗೇ ಸುಮ್ಮನೆ ಹತ್ತಿದರೂ ಏದುಸಿರು ಬಂದುಬಿಡುತ್ತದೆ. ಅಂಥದ್ದರಲ್ಲಿ ಈ ಬೆಟ್ಟವನ್ನು ಸ್ವಾಮೀಜಿಯೊಬ್ಬರು ದೀರ್ಘದಂಡ ನಮಸ್ಕಾರದ ಮೂಲಕ ಏರಿ ಗಮನ ಸೆಳೆದಿದ್ದಾರೆ.

ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಅಮರಯ್ಯ ಸ್ವಾಮಿ ಹಿರೇಮಠ ಎಂಬುವರು ಶನಿವಾರ ದೀರ್ಘದಂಡ ನಮಸ್ಕಾರ ಹಾಕುತ್ತಲೇ ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ. ಇಪ್ಪತ್ತು ದಿನಗಳ‌ ಹಿಂದೆಯೇ ಬೆಟ್ಟ ಏರಲು ನಿರ್ಧರಿಸಿ ಗ್ರಾಮದಿಂದ ಭಕ್ತರೊಡನೆ ದೀರ್ಘದಂಡ ನಮಸ್ಕಾರ ಹಾಕಲು ಶುರುಮಾಡಿದ್ದರು.

ಇಂದು ಅವರು ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ತಲುಪಿದ್ದು, ಮೆಟ್ಟಿಲುಗಳ ಮೇಲೆಯೇ ದೀರ್ಘದಂಡ ನಮಸ್ಕಾರ ಹಾಕಿದರು. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ, ಶಾಂತಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ನಮಸ್ಕಾರ ಹಾಕಿದ್ದಾರೆ. ಜೈಶ್ರೀರಾಮ್, ಜೈ ಆಂಜನೇಯ ಎಂದು ಘೋಷಣೆ ಕೂಗುತ್ತ ಭಕ್ತರೊಂದಿಗೆ 575 ಮೆಟ್ಟಿಲುಗಳಲ್ಲಿ ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಮೆರೆದರು. ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ಜತೆ ಸಾಗಿ ಆಂಜನೇಯನ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net