ಹಳ್ಳಿಗಳಲ್ಲಿ ಸಮಗ್ರ ಸ್ವಚ್ಛತಾ ಅಭಿಯಾನಕ್ಕೆ ಜಿಪಂ ಸಿಇಒ ಚಾಲನೆ

Swachha_Grama
Published on

ತುಮಕೂರು: ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸಮಗ್ರ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದು ಇದರ ಯಶಸ್ಸಿಗೆ ತಾಲೂಕು ಮಟ್ಟದ ಅಧಿಕಾರಿಯನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಲಾಗುವುದು ಎಂದು ಜಿಪಂ ಸಿಇಒ ಜಿ.ಪ್ರಭು ಹೇಳಿದರು.

ತಾಲೂಕಿನ ಕೆಸ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಚತಾ ಹಿ ಸೇವಾ ಅಭಿಯಾನದಡಿ ಶುಕ್ರವಾರ ಸ್ವಚ್ಛತಾ ಅಭಿಯಾನ ತುಮಕೂರು-2023 ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ 330 ಗ್ರಾಪಂಗಳಲ್ಲಿ ಸ್ವಚ್ಛತಾ ಅಭಿಯಾನ ಆರಂಭಿಸಿದ್ದು ಇದು ತೋರಿಕೆ ಆಗಬಾರದು. ಸಮಗ್ರವಾಗಿ ಗ್ರಾಮಗಳ ಸ್ವಚ್ಛಗೊಳಿಸುವ ಮೂಲಕ ಉತ್ತಮ ಪರಿಸರ ನಿರ್ಮಿಸಬೇಕು. ಹಾಗಾಗಿ, ಇದರ ಉಸ್ತುವಾರಿ ನೋಡಲ್ ಅಧಿಕಾರಿಗಳನ್ನು ನೇಮಿಸಲಿದ್ದು ಅದರ ವರದಿ ನೀಡಬೇಕು ಎಂದರು.

ದಂಡಂ ದಶಗುಣಂ!: ಸಮಗ್ರ ಸ್ವಚ್ಛತಾ ಅಭಿಯಾನ ಅನುಷ್ಟಾನದಿಂದ ಹಸಿ, ಒಣ, ಪ್ಲಾಸ್ಟಿಕ್ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಗೆ ಕ್ರಮವಹಿಸಿದ್ದು ಇದರಿಂದ ಪರಿಸರ ಸಂರಕ್ಷಣೆ ಜತೆಗೆ ಸಾರ್ವಜನಿಕರ ಆರೋಗ್ಯದಲ್ಲಿಯೂ ಸುಧಾರಣೆ ಕಾಣಬಹುದಾಗಿದೆ. ಮೊದಲಿಗೆ ಜನರಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸಲಾಗುವುದು. ನಂತರ ಎಲ್ಲೆಂದೆರಲ್ಲಿ ಕಸ ಎಸೆಯುವರಿಗೆ ದಂಡ ವಿಧಿಸಲಾಗುವುದು ಎಂದು ಪ್ರಭು ಎಚ್ಚರಿಸಿದರು.

ತಾಪಂ ಇಒ ಹರ್ಷ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಸ್ತೂರು ಗ್ರಾಪಂ ಅಧ್ಯಕ್ಷೆ ಸಿ.ಸುನಿತ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಸೇವಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಉಪಾಧ್ಯಕ್ಷೆ ಪವಿತ್ರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್, ಪಿಆರ್‌ಇಡಿ ಇಇ ಬಿ.ತಿಮ್ಮರಾಯಪ್ಪ, ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಇ ರವೀಶ್, ಡಿಡಿಪಿಐ ರಂಗಧಾಮಯ್ಯ, ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕ ಎಸ್.ಎಸ್.ಮಂಜುನಾಥ್ ಉಪಸ್ಥಿತರಿದ್ದರು.

ಗ್ರಾಪಂಗಳಲ್ಲಿ ಸ್ವಚ್ಛತಾ ಆಯವ್ಯಯ ರೂಪಿಸಬೇಕು. ಪ್ರತೀ ಮನೆಯಿಂದ 20 ರೂ., ಅಂಗಡಿಗಳಿಂದ 50 ರೂ., ಕಲ್ಯಾಣ ಮಂಟಪಗಳಿಂದ 500 ರೂ., ಸಂಗ್ರಹಿಸಬೇಕು. ಆ ಮೂಲಕ ಮನೆ, ಮನೆ ಕಸ ಸಂಗ್ರಹಿಸುವ ಮಹಿಳೆಯರಿಗೆ ಪ್ರತೀ ತಿಂಗಳು 7 ಸಾವಿರ ರೂ.,ವರೆಗೆ ಪ್ರೋತ್ಸಾಹಧನವಾಗಿ ನೀಡಬೇಕು. ಇದಲ್ಲದೆ, ಎಲ್ಲೆಂದರಲ್ಲಿ ಕಸ ಎಸೆಯುವರಿಗೆ ವೈಯಕ್ತಿವಾಗಿ 500 ರೂ., ಹೋಟೆಲ್, ಅಂಗಡಿಯವರಿಗೆ 5000 ರೂ.,ವರೆಗೆ ದಂಡ ಹಾಕಿ. ಈ ದಂಡವನ್ನು ವೈಜ್ಞಾನಿಕ ಕಸ ವಿಲೇವಾರಿಗೆ ಬಳಸಿ. ಜಿ.ಪ್ರಭು ಸಿಇಒ, ಜಿಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net