

ಚೇಳೂರು : ಭೂಮಿ ತಂತ್ರಾಶ ನೆಪದಲ್ಲಿ ಮೂರು ತಿಂಗಳಿಂದ ನೋಂದಣಿ, ಖಾತೆ ಕಾರ್ಯಗಳು ಸ್ಥಗಿತಗೊಂಡ ಕಾರಣ ರೈತರು ಆಕ್ರೋಶಗೊಂಡಿದ್ದಾರೆ.
ಚೇಳೂರು ನೂತನ ತಾಲೂಕು ರಚನೆಯಾಗಿ ವರ್ಷಗಳೇ ಕಳೆದರೂ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು, ಏನಿಗದಲೆ, ಟಿ.ಗೊಲ್ಲಹಳ್ಳಿ, ಬುರುಡಗುಂಟೆ 4 ಕಂದಾಯ ವೃತ್ತಗಳು, ಬಾಗೇಪಲ್ಲಿ ತಾಲೂಕಿನ ನಾರೇಮದ್ದೇಪಲ್ಲಿ, ಕುರುಬರಹಳ್ಳಿ, ಸೋಮನಾಥಪುರ, ಪೋಲನಾಯಕನಹಳ್ಳಿ 4 ಕಂದಾಯ ವೃತ್ತಗಳು ಮತ್ತು ಚೇಳೂರು ಹೋಬಳಿಯ 9 ಕಂದಾಯ ವೃತ್ತಗಳ ಗ್ರಾಮಗಳನ್ನು ಭೂಮಿ ತಂತ್ರಾಶದಲ್ಲಿ ಅಳವಡಿಸಲು ಚಿಂತಾಮಣಿ ತಾಲೂಕನ್ನು ವಿಭಜಸಿ ಭೂಮಿ ತಂತ್ರಾಂಶಕ್ಕೆ ಸೇರಿಸಲು ಜು.9ರಂದು ಸರ್ಕಾರ ಆದೇಶ ಮಾಡಿತ್ತು. ಆದೇಶವಾಗಿ ಮೂರು ತಿಂಗಳಾದರೂ ಇನ್ನೂ ಕಾರ್ಯಾರಂಭಗೊಂಡಿಲ್ಲ.
ಭೂಮಿ ತತ್ರಾಂಶ ನೆಪದಲ್ಲಿ ಮೂರು ತಿಂಗಳಿನಿಂದ ಜಮೀನು, ಜಾಗ, ಮನೆಗಳ ನೋಂದಣಿ ಮತ್ತು ಪೌತಿ ಖಾತೆಗಳು, ವಿಭಾಗ ನೋಂದಣಿ ಖಾತೆಗಳನ್ನು ಮಾಡದೇ ರೈತರಿಗೆ ತೊಂದರೆ ನೀಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಲು ಸಾರ್ವಜನಿಕರು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಇದು ತುರ್ತು ಕೆಲಸವಾಗಿದ್ದು, ಆದಷ್ಟು ಶೀಘ್ರ ಕೆಲಸ ಮಾಡಿ ಜನರಿಗೆ ಅನೂಕೂಲ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.