ಮಳಿಗೆಗಳ ಹರಾಜು ಪ್ರಕ್ರಿಯೆಗೆ ತಡೆ

Published on

ಸೋಮವಾರಪೇಟೆ: ಪಟ್ಟಣದ ಕೆಲವೇ ಕೆಲವು ಮಂದಿ ವರ್ತಕರು ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟು ಮಾಡಿ ಇದೀಗ ಹರಾಜು ಪ್ರಕ್ರಿಯೆಗೆ ತಡೆ ಮಾಡುತ್ತಿರುವುದನ್ನು ಸೋಮವಾರಪೇಟೆ ಸಾರ್ವಜನಿಕ ಹೋರಾಟ ಸಮಿತಿ ಖಂಡಿಸಿದೆ.

ಪಟ್ಟಣ ಪಂಚಾಯಿತಿಯ 60 ಮಳಿಗೆಗಳ ಬಹಿರಂಗ ಹರಾಜಿಗೆ ಕಳೆದ 14 ತಿಂಗಳಿಂದ ತಡೆಯಾಜ್ಞೆ ತಂದಿರುವ ಕೆಲವು ವರ್ತಕರ ನಡೆ ಖಂಡನೀಯ. ಸರ್ಕಾರದ ನಿಯಮದ ಪ್ರಕಾರ 12 ವರ್ಷಗಳಿಗೊಮ್ಮೆ ಬಹಿರಂಗ ಹರಾಜು ಆಗಲೇಬೇಕು. ಆದರೆ ಕಳೆದ 40 ವರ್ಷಗಳಿಂದ ಕಾನೂನುಗಳನ್ನು ಉಲ್ಲಂಘಿಸಿ ನಿಯಮಬಾಹಿರವಾಗಿ ನೆಲೆ ನಿಂತಿದ್ದಾರೆ. ಅದರಲ್ಲೂ ಪಟ್ಟಣ ಪಂಚಾಯಿತಿಯ ಕೆಲವು ಸದಸ್ಯರುಗಳೇ ಮಳಿಗೆಗಳನ್ನು ಪಡೆದುಕೊಂಡು ಬಾಡಿಗೆ ಹಣವನ್ನು ಪಾವತಿಸದೇ ವಂಚಿಸಿದ್ದಾರೆ. ಪಂಚಾಯಿತಿ ಆಸ್ತಿಯನ್ನು ಕಾಪಾಡಬೇಕಾದವರೆ ಇಂದು ಪಿತೂರಿ ನಡೆಸುತ್ತಿದ್ದಾರೆ ಎಂದು ಸಮಿತಿ ಅಧ್ಯಕ್ಷ ಸಿ. ಬಿ.ಸುರೇಶ್ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ದಲಿತ ಪರ ಸಂಘಟನೆಗಳ ಮುಖಂಡ ಹಾಗೂ ಸಾರ್ವಜನಿಕ ಹೋರಾಟ ಸಮಿತಿಯ ಉಪಾಧ್ಯಕ್ಷ ಟಿ.ಈ.ಸುರೇಶ್ ಮಾತನಾಡಿ, ಕೆಲವು ವರ್ತಕರು ಮಳಿಗೆಗಳನ್ನು ಪಡೆದುಕೊಂಡು ಪಟ್ಟಣ ಪಂಚಾಯಿತಿಗೆ ಕಡಿಮೆ ಬಾಡಿಗೆ ಪಾವತಿಸಿ ಪರಭಾರೆ ಮಾಡಿ ಬಾಡಿಗೆದಾರರಿಂದ ಅತ್ಯಧಿಕ ಬಾಡಿಗೆ ವಸೂಲಿ ಮಾಡುವುದರೊಂದಿಗೆ ಅವರನ್ನು ಶೋಷಣೆ ಮಾಡುತ್ತಿದ್ದಾರೆ. ಇದೀಗ ತಡೆಯಾಜ್ಞೆ ತೆರವುಗೊಂಡಿದ್ದು, ಅ.23ರಂದು ಬಹಿರಂಗ ಹರಾಜು ನಡೆಸಲು ಪಟ್ಟಣ ಪಂಚಾಯಿತಿ ತೀರ್ಮಾನ ಮಾಡಿದೆ. ಶೇ. 18ರ ಮೀಸಲಾತಿ ಅನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಿಗೆ ಮಳಿಗೆಗಳನ್ನು ನೀಡಬೇಕಾಗಿದೆ. ಈ ಸಮುದಾಯದವರೂ ಕೂಡ ನೇರವಾಗಿ ಹರಾಜಿನಲ್ಲಿ ಭಾಗವಹಿಸಿ ಮಳಿಗೆಗಳನ್ನು ಪಡೆದು ಯಾರಿಗೂ ಪರಭಾರೆ ಮಾಡದೇ ತಾವೇ ವ್ಯಾಪಾರ ವಹಿವಾಟು ನಡೆಸಬೇಕೆಂದು ಮನವಿ ಮಾಡಿದರು.

ಸಾರ್ವಜನಿಕ ಹೋರಾಟ ಸಮಿತಿ ಪದಾಧಿಕಾರಿಗಳಾದ ಪಿ.ಎಂ.ಗಣಪತಿ, ಎಸ್.ಎ.ಪ್ರತಾಪ್, ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net