ಅನ್ಯಕೋಮಿನ ವಿದ್ಯಾರ್ಥಿಗಳ ಜತೆ ಸುತ್ತಾಡಿದ್ದಕ್ಕೆ ಹಲ್ಲೆ; ಇಬ್ಬರು ಅರೆಸ್ಟ್​

assault
ಸಾಂದರ್ಭಿಕ ಚಿತ್ರ
Published on

ಮಂಗಳೂರು: ಅನ್ಯಕೋಮಿನ ಹುಡುಗಿಯರೊಂದಿಗೆ ಕಾಣಿಸಿಕೊಂಡಿದ್ದಕ್ಕೆ ಗುಂಪೊಂದು ಯುವಕನ ಮೇಲೆ ಹಲ್ಲೆ ಮಾಡಿ ನೈತಿಕ ಪೊಲೀಸ್​​ಗಿರಿ ಮೆರೆದಿರುವ ಘಟನೆ ಮಂಗಳೂರಿನ ಉರ್ವಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧಿತರನ್ನು ಅಳಪೆ ನಿವಾಸಿ ದೀಕ್ಷಿತ್(32) ಹಾಗೂ ಲಾಯ್ಡ್ ಪಿಂಟೋ (32) ಎಂದು ತಿಳಿದು ಬಂದಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಮೊಹಮ್ಮದ್​ ಹಫೀಸ್(20)​ ಎಂದು ಗುರುತಿಸಲಾಗಿದೆ. ಮಂಗಳೂರಿನ ಪ್ರತಿಷ್ಠಿತ ಮೆಡಿಕಲ್​ ಕಾಲೇಜಿನಲ್ಲಿ ಮೊಹಮ್ಮದ್ ವ್ಯಾಸಂಗ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಘಟನೆಯ ಹಿನ್ನಲೆ

ಮೊಹಮ್ಮದ್​ ತನ್ನ ಸಹಪಾಠಿಗಳೊಂದಿಗೆ ಪಣಂಬೂರು ಬೀಚ್​ಗೆ ವಿಹಾರಕ್ಕೆಂದು ತೆರಳಿದ್ದರು. ಈ ವೇಳೆ ಇದನ್ನು ಗಮನಿಸಿದ ಆರೋಪಿಗಳು ಬೈಕಿನಲ್ಲಿ ವಿದ್ಯಾರ್ಥಿಗಳನ್ನು ಕೆಲ ದೂರ ಹಿಂಬಾಲಿಸಿ ಬಿಜೈ ಕಾಪಿಕಾಡ್​ ಎಂಬ ಪ್ರದೇಶದಲ್ಲಿ ಅವರನ್ನು ತಡೆದು ಮೊಹಮ್ಮದ್​ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಗಾಯಗೊಂಡಿದ್ದ ವಿದ್ಯಾರ್ಥಿ ತನ್ನ ಸಹಫಾಠಿಗಳ ಜತೆಗೂಡಿ ಉರ್ವಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ ಸ್ಥಳದ ಸುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸ್ಕೂಟರ್​​ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಪೋನ್​ ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಉರ್ವಾ ಪೊಲೀಸ್​ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net