ವಿಚಾರಣಾಧೀನ ಆರೋಪಿ ಆತ್ಮಹತ್ಯೆ?

Published on

ಚನ್ನಪಟ್ಟಣ: ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸ್​ ಠಾಣೆಯಲ್ಲಿ ವಿಚಾರಣಾಧೀನ ಆರೋಪಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

ಮದ್ದೂರು ತಾಲೂಕಿನ ದುಂಡಹಳ್ಳಿಯ ರಮೇಶ್​(59) ಮೃತ. ಆ.18ರಂದು ಕಳ್ಳತನ ಪ್ರಕರಣ ಸಂಬಂಧ ರಮೇಶ್​ ಹಾಗೂ ಆತನ ಮಗ ಮಂಜು ಹಾಗೂ ಮತ್ತೊಬ್ಬ ಆರೋಪಿ ವೆಂಕಟೇಶ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಮೂರು ದಿನ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿತ್ತು. ಬುಧವಾರ ಬೆಳಗ್ಗೆ ರಮೇಶ್​ ಶೌಚಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಪ್ರಕರಣ ಹಲವು ತಿರುವು ಪಡೆದುಕೊಂಡಿದೆ.

ಲಾಕಪ್​ ಡೆತ್​ ಆರೋಪ!

ಮೃತದೇಹವನ್ನು ಎಂ.ಕೆ.ದೊಡ್ಡಿ ಪೊಲೀಸರು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು. ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್​ ಗೌಡ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ನಗರದ ಸರ್ಕಾರಿ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆಯನ್ನು ಪೊಲೀಸರೇ ಚಿತ್ರಹಿಂಸೆಕೊಟ್ಟು ಸಾಯಿಸಿದ್ದಾರೆ ಎಂದು ಮೃತನ ಪುತ್ರಿಯರು ಆರೋಪಿಸಿದ್ದಾರೆ.

ಪತಿಯ ಸಾವಿಗೆ ನ್ಯಾಯ ಸಿಗಬೇಕು, ನ್ಯಾಯ ಸಿಗುವವರೆಗೂ ಶವ ಸ್ವೀಕರಿಸುವುದಿಲ್ಲ ಎಂದು ಮೃತನ ಪತ್ನಿ ಆಸ್ಪತ್ರೆಯ ಬಳಿ ಪಟ್ಟು ಹಿಡಿದಿದ್ದರು, ನಂತರ, ನ್ಯಾಯಾಧೀಶರ ಸಮ್ಮುಖದಲ್ಲಿ ಮೃತನ ಮರಣೋತ್ತರ ಪರೀೆ ನಡೆಸಿ, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ಸೆರೆ

ಚನ್ನಪಟ್ಟಣ ತಾಲೂಕಿನ ಮಂಡ್ಯ ಬೊಮ್ಮನಾಯಕನಹಳ್ಳಿ (ಎಂ.ಬಿ.ಹಳ್ಳಿ)ಯ ಹೊನ್ನಾರತಿ ದೇವಸ್ಥಾನದಲ್ಲಿ ಜೂ.25ರಂದು ಕಳ್ಳತನ ನಡೆದಿತ್ತು. ದೂರು ದಾಖಲಿಸಿಕೊಂಡಿದ್ದ ಎಂ.ಕೆ.ದೊಡ್ಡಿ ಠಾಣೆ ಪೊಲೀಸರು, ತಾಲೂಕಿನ ದುಂಡಹಳ್ಳಿಯ ಮೂವರನ್ನು ಆ.18ರಂದು ಬಂಧಿಸಿದ್ದರು. ಇನ್ನೊರ್ವ ಆರೋಪಿ ಉಮೇಶ್​ ಎಂಬಾತನನ್ನು ನಂತರ ಬಂಧಿಸಲಾಗಿತ್ತು. ಬುಧವಾರ ಸಂಜೆ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು.

ಪ್ರಕರಣ ಸಿಐಡಿಗೆ!

ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ರಮೇಶ್​ನನ್ನು ಇಲಾಖೆ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆದರೆ, ಬುಧವಾರ ಮುಂಜಾನೆ ರಮೇಶ್​ ಶೌಚಗೃಹದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಿಸಿಲ್ಲ. ಸದ್ಯ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ರಾಮನಗರ ಡಿವೈಎಸ್ಪಿ ನೇತೃತ್ವದಲ್ಲಿ ಎಂ.ಕೆ.ಪೊಲೀಸ್​ ಠಾಣೆಯ ಎಲ್ಲ ಸಿಬ್ಬಂದಿ ವಿಚಾರಣೆ ಆಗುತ್ತಿದೆ. ರಾಮನಗರ ಡಿವೈಎಸ್ಪಿಗೆ ವರದಿ ನೀಡಲು ಸೂಚಿಸಿದ್ದೇವೆ. ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀೆ ಮಾಡಲಾಗಿದೆ. ಸಿಐಡಿ ವಿಚಾರಣೆ ಬಳಿಕ ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಲಿದೆ ಎಂದು ಎಸ್ಪಿ ಶ್ರೀನಿವಾಸ್​ ಗೌಡ ತಿಳಿಸಿದರು.

ಪ್ರಕರಣದ ಸುತ್ತ ಅನುಮಾನದ ಹುತ್ತ

ಪೊಲೀಸರ ಕಿರುಕುಳದಿಂದ ರಮೇಶ್​ ಸತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದರೆ, ಮತ್ತೊಂದೆಡೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿಯನ್ನು ಆಸ್ಪತ್ರೆ ತರುವಾಗ ಮೃತಪಟ್ಟಿದ್ದಾನೆ ಎಂದು ಎಸ್ಪಿ ಹೇಳಿದ್ದಾರೆ. ಈ ಪ್ರಕರಣದ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ನ್ಯಾಯಾಲಯದಿಂದ ಅನುಮತಿ ಪಡೆದು ಕಸ್ಟಡಿಗೆ ಪಡೆದಿದ್ದ ಆರೋಪಿಯ ಸಾವಿನ ಹಿಂದೆ ಪೊಲೀಸರ ಕರ್ತವ್ಯ ಲೋಪ ಇದೆ ಎಂಬ ಬಗ್ಗೆಯೂ ಚರ್ಚೆಗಳು ಶುರುವಾಗಿವೆ. ಪೊಲೀಸರ ಮಾಹಿತಿ ಪ್ರಕಾರ ಈತನ ವಿರುದ್ಧ ಈ ಮೊದಲು ಸಹ ಕಳ್ಳತನ ಪ್ರಕರಣವಿತ್ತು ಎನ್ನಲಾಗಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕವರಿ ಸಹ ಮಾಡಲಾಗಿತ್ತು ಎನ್ನಲಾಗಿದೆ.

ಹಲವು ಪ್ರಶ್ನೆ ಉದ್ಭವ

ಶೌಚಗೃಹದಲ್ಲಿ ನೇಣು ಬೀಗಿದುಕೊಳ್ಳಲು ಸಾಧ್ಯವೇ? ಈ ವೇಳೆ ಪೊಲೀಸರು ಇರಲಿಲ್ಲವೇ? ಹೀಗೆ ನಾನಾ ಪ್ರಶ್ನೆಗಳು ಹುಟ್ಟಿವೆ. ಇನ್ನೂ ಈ ಪ್ರಕರಣದಲ್ಲಿ ಮೃತ ಹಾಗೂ ಅವರ ಮಗನ ಪಾತ್ರ ಇರಲಿಲ್ಲ. ಆದರೂ, ಕಳ್ಳತನ ಪ್ರಕರಣ ಒಪ್ಪಿಕೊಳ್ಳುವಂತೆ ಎಂ.ಕೆ.ದೊಡ್ಡಿ ಪೊಲೀಸರು ಸಾಕಷ್ಟು ನೀಡಿದ್ದರು. ಕುಟುಂಬದವರಾದ ನಮಗೂ ಕಳ್ಳತನದ ವಸ್ತುಗಳನ್ನು ಪಡೆದಿರುವುದಾಗಿ ಒಪ್ಪಿಕೊಳ್ಳಿ ಎಂದು ಕಿರುಕುಳ ನೀಡಿದ್ದರು ಎಂದು ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿರುವುದು ಪ್ರಕರಣ ತಿರುವಿಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net