ಶರವೂರು ದೇವಸ್ಥಾನಕ್ಕೆ ಭೂಮಾಪಕರು ಭೇಟಿ

parishilane
Published on

ಕಡಬ: ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತು ಪೌಳಿ ನವೀಕರಣದ ಅಂದಾಜು ಮೊತ್ತದ ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು ಜಿಲ್ಲಾಧಿಕಾರಿಗಳ ಪತ್ರದಂತೆ ಪರಿಶೀಲನೆಗಾಗಿ ಹಿಂದು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರು ಕೇಂದ್ರ ಕಚೇರಿ ವೀರಶೈವಾಗಮ ಅಗಮ ಪಂಡಿತ ಡಾ.ವೈ.ಆರ್.ನಾಗಭೂಷಣಾರಾಧ್ಯ, ಕಾರ್ಯಪಾಲಕ ಅಭಿಯಂತ ಎನ್.ಬಿ.ಹರಿಶಂಕರ್, ಭೂಮಾಪಕ ಹರ್ಷವರ್ಧನ್ ಟಿ. ಅಧಿಕಾರಿಗಳ ತಂಡ ದೇವಸ್ಥಾನದ ಗರ್ಭಗುಡಿ, ನಮಸ್ಕಾರ ಮಂಟಪದ ಕೆಲಸ ಕಾರ್ಯ, ದೇವಸ್ಥಾನ ನವೀಕರಣದ ಅಂದಾಜು ಪಟ್ಟಿ, ದೇವಸ್ಥಾನದ ದಾಖಲೆ ಪರಿಶೀಲನೆ ನಡೆಸಿ, ದೇವಸ್ಥಾನದ ಇತಿಹಾಸದ ಬಗ್ಗೆ ಮಾಹಿತಿ ಪಡೆದರು.

ಸಿಬ್ಬಂದಿ ಹಾಜರಾತಿ ಪುಸ್ತಕ ಪರಿಶೀಲನೆ ನಡೆಸಿದಾಗ ರಜೆ ಎಂದು ಅಧಿಕಾರಿಗಳು ಬರೆದರು. ಸಹಾಯಕ ಅರ್ಚಕರು, ಸಿಬ್ಬಂದಿ ಕಡ್ಡಾಯವಾಗಿ ಹಾಜರಾತಿ ಹಾಕುವಂತೆ ಸೂಚನೆ ನೀಡಿದರು. ದೇವಸ್ಥಾನದ ರೂಢಿ, ಸಂಪ್ರದಾಯದಂತೆ ಕಾನೂನುಬದ್ಧ್ದವಾಗಿ ದೇವಸ್ಥಾನ ನಡೆಯಬೇಕೆಂದು ತಿಳಿಸಿ, ಶ್ರೀ ದೇವಿಗೆ ಶೈವಾಗಮ ಪದ್ಧತಿಯಲ್ಲಿ ಪೂಜಾ ವಿಧಿವಿಧಾನ ನಡೆಯಬೇಕು. ಅದಕ್ಕೆ ಬೇಕಾದ ಅರ್ಹತೆ ಅರ್ಚಕರು ಹೊಂದಬೇಕೆಂದು ತಿಳಿಸಿದರು.

ಭೂಮಾಪಕ ಹರ್ಷವರ್ಧನ್ ಮಾತನಾಡಿ, ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗವನ್ನು ಸರ್ವೇ ಮಾಡಿ ಗಡಿ ಗುರುತು ಮಾಡಲಾಗುವುದು. ಜೀರ್ಣೋದ್ಧಾರ ಕೆಲಸ ಕಾರ್ಯಗಳಿಗೆ ಆಡಳಿತಾತ್ಮಕ ಮಂಜೂರಾತಿಗೆ ಸರ್ಕಾರಕ್ಕೆ ವರದಿ ಮಾಡುವುದಾಗಿ ತಿಳಿಸಿದರು. ನಂತರ ದೇವಸ್ಥಾನಕ್ಕೆ ಸಂಬಂಧಪಟ್ಟ ಕೆಲವು ಜಾಗ ವೀಕ್ಷಣೆ ಮಾಡಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ವ್ಯವಸ್ಥಾಪನಾ ಸಮಿತಿ ಸದಸ್ಯ ಹರಿಪ್ರಸಾದ್ ಉಪಾಧ್ಯಾಯ ಕುಪ್ಲಾಜೆ, ರಾಧಾಕೃಷ್ಣ ರೈ ಪರಾರಿಗುತ್ತು, ವಿಠಲ ರೈ ಪೆರಾಬೆ ಪಟ್ಟೆ, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, ದೇವಸ್ಥಾನದ ಅರ್ಚಕರು, ಸಿಬ್ಬಂದಿ, ಊರವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net