

ರೋಣ: ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಬಸರಕೋಡ ಗ್ರಾಮದಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, ಹಾನಿ ಪ್ರದೇಶವನ್ನು ಶಾಸಕ ಜಿ.ಎಸ್. ಪಾಟೀಲ ವೀಕ್ಷಿಸಿದರು. ಹಾನಿ ಪ್ರದೇಶವನ್ನು ಸರ್ವೆ ಮಾಡಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಸರಕೋಡ ನೂತನ ಗ್ರಾಮದಲ್ಲಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ನಮಗೆ ಆಸರೆ ಮನೆಗಳ ಹಕ್ಕುಪತ್ರ ನೀಡಿಲ್ಲ. ಮನೆ ನಿರ್ವಣವಾಗಿದ್ದರೂ ಅವುಗಳ ಕೀ ಗಳನ್ನು ಹಸ್ತಾಂತರ ಮಾಡಿಲ್ಲ. ಮುಖ್ಯವಾಗಿ ಅಲ್ಲಿ ಉಳ್ಳವರಿಗೆ ವಸತಿ ಮನೆ ನೀಡಿ ವಸತಿ ರಹಿತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ತಹಸೀಲ್ದಾರ್ ವಾಣಿ ಉಂಕಿ ಅವರೊಂದಿಗೆ ಸಮಸ್ಯೆ ಕುರಿತು ರ್ಚಚಿಸಿದರು. ಹಕ್ಕು ಪತ್ರ ವಿತರಿಸುವ ಕೆಲಸವನ್ನು ನೀವು ಮಾಡಬೇಕು. ಒಬ್ಬರ ಮೇಲೆ ಒಬ್ಬರು ಹಾಕಿ ಸಮಸ್ಯೆ ಮಾಡಬೇಡಿ ಎಂದು ಸೂಚಿಸಿದರು.
ತಾಪಂ ಇಒ ಎ.ಎನ್. ರವಿ, ಲೋಕೋಪಯೋಗಿ ಇಲಾಖೆಯ ಇಇ ಛಲವಂತಪ್ಪ ನಾಯ್ಕರ, ಮುಖಂಡರಾದ ಪರಶುರಾಮಪ್ಪ ಅಳಗವಾಡಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.