

ಕುಂದಾಪುರ: ವೈಕಲ್ಯ ಎಷ್ಟೇ ಇದ್ದರೂ ಸಾಧಕ ಕ್ರೀಡಾಳುಗಳು ಪ್ಯಾರಾಲಿಂಪಿಕ್ಸ್ನಲ್ಲಿ ಸಾಧನೆ ಮಾಡಿ ದೇಶದ ಗಮನ ಸೆಳೆದಿದ್ದಾರೆ. ಹಾಗಾಗಿ ಸಾಧನೆಗೆ ಅಂತಶ್ಶಕ್ತಿ ಮುಖ್ಯ. ಮನೋಭೂಮಿಕೆ ಬೇಕು, ಅದಕ್ಕೆ ತಕ್ಕ ವೇದಿಕೆ ಬೇಕು, ಆತ್ಮಸ್ಥೈರ್ಯ ಬೇಕು ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಆನಂದ ಜೆ. ಹೇಳಿದರು.
ಕುಂದಾಪುರದ ರಕ್ತೇಶ್ವರಿ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಅನುಷ್ಠಾನ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಉಡುಪಿ, ಪುರಸಭೆ ಕುಂದಾಪುರ ಮತ್ತು ಅಂಗವಿಕಲರ ಗ್ರಾಮೀಣ ಪುನರ್ವಸತಿ ಯೋಜನೆ ಸಹಯೋಗದೊಂದಿಗೆ ಮಂಗಳವಾರ ಪುರಸಭೆ ವ್ಯಾಪ್ತಿಯ ವಿಕಲಚೇತನರ ಸಮೀಕ್ಷೆ ಹಾಗೂ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎಲ್.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಕುಂದಾಪುರ ಉಪಾಧ್ಯಕ್ಷೆ ವನಿತಾ ಎಸ್.ಬಿಲ್ಲವ ಉದ್ಘಾಟಿಸಿದರು. ಡಿಡಿಆರ್ಸಿ ಉಡುಪಿ ಸದಸ್ಯ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರ್, ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಪುರಸಭೆ ಅಧಿಕಾರಿ ಗಣೇಶ್ ಜನ್ನಾಡಿ ಉಪಸ್ಥಿತರಿದ್ದರು. ಅಂಗವಿಕಲ ಇಲಾಖೆ ತಾಲೂಕು ಸಂಪನ್ಮೂಲ ವ್ಯಕ್ತಿ ಮಂಜುನಾಥ ಹೆಬ್ಬಾರ್ ಪ್ರಸ್ತಾವಿಸಿ, ಡಿಡಿಆರ್ಸಿ ಜಿಲ್ಲಾ ನೋಡಲ್ ಅಧಿಕಾರಿ ಜಯಶ್ರೀ ಎಸ್. ವಂದಿಸಿದರು.
ಒಂದು ಅಂಗದ ಕೊರತೆಯಿದ್ದರೆ ಇನ್ನೊಂದು ಅಂಗ ಕ್ರಿಯಾಶೀಲವಾಗಿರುತ್ತದೆ. ಹಾಗಾಗಿ ಅಂಗವಿಕಲರಿಗೆ ಕೀಳರಿಮೆ ಅನಗತ್ಯ. ಖಚಿತ ಮಾಹಿತಿಯಿಂದ ಯೋಜನೆ ಅನುಷ್ಠಾನ ಸಾಧ್ಯ. ಡಿಡಿಆರ್ಸಿ ವತಿಯಿಂದ ತರಬೇತಿ, ತಪಾಸಣೆ, ವಿತರಣೆ ನಡೆಯುತ್ತದೆ.-ಡಾ.ಗಣನಾಥ ಎಕ್ಕಾರ್, ಡಿಡಿಆರ್ಸಿ ಉಡುಪಿ ಸದಸ್ಯ ಕಾರ್ಯದರ್ಶಿ