

ಗಜೇಂದ್ರಗಡ: ಬಸವಾದಿ ಶರಣರ ವಚನಗಳು ಕನ್ನಡಿಗರಿಗೆ ಮಾತ್ರ ಸೀಮಿತವಲ್ಲ, ಅವು ಮಾನವ ಕುಲದ ಆಸ್ತಿಯಾಗಿವೆ ಎಂದು ಬಣಜಿಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಕೀರ್ತಿ ಕೊಟಗಿ ಹೇಳಿದರು.
ಪಟ್ಟಣದ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ 11ನೇ ವಾರ್ಷಿಕೋತ್ಸವ ಅಂಗವಾಗಿ ಬಣಜಿಗ ಸಮಾಜದ ಮಹಿಳಾ ಘಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಚನ ಗಾಯನ, ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕ, ದಾಸೋಹ, ಸಮಾನತೆ, ವೈಚಾರಿಕತೆ, ಮಾನವೀಯತೆ ಮುಂತಾದ ತತ್ವಗಳನ್ನು ವಚನಗಳು ತಿಳಿಸುತ್ತವೆ. ಇಂತಹ ಅಮೂಲ್ಯ ವಿಚಾರಗಳನ್ನು ಮಕ್ಕಳಿಗೆ ಕಲಿಸಬೇಕು. ಅವರ ಮನಸು ಹದವಾದ ಭೂಮಿ ಇದ್ದಂತೆ. ಅಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಬೇಕು. ಆಗ ಮಾತ್ರ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳು ಸಿಗುತ್ತಾರೆ ಎಂದರು.
ಸ್ಪರ್ಧೆಯಲ್ಲಿ 38 ವಿದ್ಯಾರ್ಥಿಗಳು ಬಾಗವಹಿಸಿದ್ದರು, ಶಂಕ್ರಣ್ಣ ಅಂಗಡಿ, ಬಸವರಾಜ ಶೀಲವಂತರ, ಎಂ.ಬಿ. ಬಿರಾದಾರ, ಪಿ.ಎಂ. ಜಾಲವಾದಿ ನಿರ್ಣಾಯಕರಾಗಿದ್ದರು. ಸ್ಪರ್ಧೆಯ ವಿಜೇತರ ಹೆಸರನ್ನು ಜೂ. 25ರಂದು ಹಮ್ಮಿಕೊಂಡಿರುವ ಸಮಾಜದ ವಾರ್ಷಿಕೋತ್ಸವ ಸಮಾರಂಭದಲ್ಲಿ ಘೋಷಣೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದರು.
ಬಣಜಿಗ ಸಮಾಜದ ಮಹಿಳಾ ಗೌರವಾಧ್ಯಕ್ಷೆ ಸುವರ್ಣ ನಂದಿಹಾಳ, ಅನಸೂಯಾ ವಾಲಿ, ಸಹನಾ ಕೊಟಗಿ, ಶರಣಮ್ಮ ಅಂಗಡಿ, ಭುವನೇಶ್ವರಿ ಕತ್ತಿಶೆಟ್ಟರ, ಸುಕನ್ಯಾ ಹೊಗರಿ, ಗೀತಾ ವಾಲಿ, ದಾನಮ್ಮ ಪಟ್ಟೇದ, ವಿಜಯಲಕ್ಷ್ಮೀ ಚಟ್ಟೇರ ಇದ್ದರು.